ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಕುರುಬ ಸಮಾಜದ ಕಾರ್ಯಾಧ್ಯಕ್ಷ ಧರ್ಮಪ್ಪ ಒತ್ತಾಯ
ಹೊನ್ನಾಳಿ, ಮೇ 26- ಕುರುಬ ಸಮಾಜದ ಮುಖಂಡ ಹಾಗೂ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವಂತೆ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಕುರುಬ ಸಮಾಜದ ಕಾರ್ಯಾಧ್ಯಕ್ಷ ಧರ್ಮಪ್ಪ ಒತ್ತಾಯಿಸಿದರು.
ಪಟ್ಟಣದಲ್ಲಿ ಅವಳಿ ತಾಲ್ಲೂಕುಗಳ ಕುರುಬ ಸಮಾಜದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಎಚ್.ಬಿ. ಮಂಜಪ್ಪ ಅವರ ಕೊಡುಗೆ ಅಪಾರವಿದೆ. ಪಕ್ಷದಿಂದ ಅನ್ಯಾಯವಾದರೂ ಪಕ್ಷ ವಿರೋಧಿ ಚಟುವಟಿಕೆ ಮಾಡದೇ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ ಆದ್ದರಿಂದ ಪಕ್ಷದ ವರಿಷ್ಠರು ಮಂಜಪ್ಪ ಅವರಿಗೆ ಅವಕಾಶ ನೀಡಬೇಕು ಎಂದರು.
2013, 2018 ಮತ್ತು 2023ರ ಚುನಾವಣೆಯಲ್ಲೂ ಪ್ರಬಲ ಆಕಾಂಕ್ಷಿಯಾಗಿದ್ದ ಮಂಜಪ್ಪ ಅವರಿಗೆ ಪಕ್ಷದಿಂದ ಟಿಕೆಟ್ ಕೈ ತಪ್ಪಿದರೂ ಪಕ್ಷವನ್ನು ದ್ವೇಷಿಸದೇ, ಶಾಸಕ ಡಿ.ಜಿ. ಶಾಂತನಗೌಡ ಅವರ ಗೆಲುವಿಗೆ ಸಹಕರಿಸಿದ್ದಾರೆ ಎಂದು ಹೇಳಿದರು.
ಅವಳಿ ತಾಲ್ಲೂಕಿನ ಕುರುಬ ಸಮಾಜದ ಅಧ್ಯಕ್ಷ ನೆಲಹೊನ್ನೆ ಮೋಹನ್ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮೊದಲು ಅಭ್ಯರ್ಥಿಯನ್ನು ಗೆಲ್ಲಿಸಿ, ನಂತರ ಮಂಜಪ್ಪರನ್ನು ಎಂಎಲ್‌ಸಿ ಮಾಡೋಣ ಎಂದು ಭರವಸೆ ನೀಡಿದ್ದರು. ಆದ್ದರಿಂದ ಸಚಿವರು ತಮ್ಮ ಮಾತಿನಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಶೇ.80ರಷ್ಟು ಕುರುಬ ಸಮಾಜದ ಬೆಂಬಲ ಹೊಂದಿದ ಮಂಜಪ್ಪ ಅವರಿಗೆ ಎಂಎಲ್ಸಿ ಚುನಾವಣೆಗೆ ಅವಕಾಶ ನೀಡಿದರೆ ಸಮಾಜಕ್ಕಾದ ಅನ್ಯಾಯ ಸರಿಪಡಿಸಿದಂತಾಗುತ್ತದೆ. ಆದ್ದರಿಂದ ಪಕ್ಷದ ಶಾಸಕರು ಹೈಕಮಾಂಡ್‌ಗೆ ಒತ್ತಾಯಿಸಬೇಕು ಎಂದು ವಿನಂತಿಸಿದರು.
ನರಸಪ್ಪ, ಬಸವರಾಜ್ ಬಸವನಹಳ್ಳಿ, ಎಚ್.ಡಿ. ವಿಜೇಂದ್ರಪ್ಪ, ಕುಂಬಳೂರು ವಾಗೀಶ್, ಬೆನಕಪ್ಪ ಹರಳಹಳ್ಳಿ, ಕೆ. ಪುಟ್ಟಪ್ಪ, ಖಜಾಂಚಿ ಎಚ್.ಎ. ನರಸಿಂಹಪ್ಪ, ಸಮಾಜದ ಮುಖಂಡರಾದ ಸರಳಿನ ಮನೆ ರಾಜಪ್ಪ, ಎಚ್.ಬಿ. ಅಣ್ಣಪ್ಪ, ಮಾರಿಕೊಪ್ಪದ ಹಳದಪ್ಪ, ಚಿನ್ನಪ್ಪ, ತಿಮ್ಮೇನಹಳ್ಳಿ ಹನುಮಂತಪ್ಪ, ನೆಲಹೊನ್ನೆ ಹಾಲೇಶಪ್ಪ, ಆಂಜನೇಯ, ಸತ್ತಿಗೆ ರಾಜಪ್ಪ, ಮಾರಜೋಗಿ ಬಸವರಾಜಪ್ಪ ಮತ್ತು ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.