ಬೆಸ್ಕಾಂ ಸಿಬ್ಬಂದಿ ನೋಡಿದರೂ ಸರಿಪಡಿಸದೇ ನಿರ್ಲಕ್ಷ್ಯ
ದಾವಣಗೆರೆ, ಮೇ 23- ತಾಲ್ಲೂಕಿನ ನೇರಿಗೆ ಗ್ರಾಮದ ದಂಬಳಿ ಮಾದೇಶ್ವರಪ್ಪ ಅವರ ಜಮೀನಿನಲ್ಲಿ ಹಾದು ಹೋದ 11 ಕೆ.ವಿ ವಿದ್ಯುತ್ ಲೈನ್ನ 4 ಕಂಬಗಳು ಬೀಳುವ ಸ್ಥಿತಿಯಲ್ಲಿದ್ದು, ಜಮೀನಿನ ಮಾಲೀಕರಿಗೆ ಕೃಷಿ ಮಾಡಲು ಜೀವ ಭಯ ಕಾಡುತ್ತಿದೆ.
ತಾಲ್ಲೂಕಿನ ಆನಗೋಡು ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ನೇರಿಗೆ ಗ್ರಾಮದಿಂದ ಕೊಡಗನೂರಿಗೆ ಹೋಗುವ ಮಾರ್ಗದಲ್ಲಿ ದೊಡ್ಡರಂಗವ್ವನಹಳ್ಳಿಯ ಜಮೀನುಗಳಿಗೆ ಹೋಗಿರುವ ಕಂಬಗಳಲ್ಲಿ ಈ ವ್ಯತ್ಯಾಸ ಕಂಡುಬಂದಿದೆ.
ಜಿಲ್ಲೆಯಲ್ಲಿ ಮಳೆಯ ಸಿಂಚನದಿಂದಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತರಿಗೆ ನೆಲಕ್ಕೆ ಉರುಳುವ ಸ್ಥಿತಿಯ ಕಂಬಗಳಿಂದ ಅಪಾಯ ಸಂಭವಿಸುವುದು ನಿಶ್ಚಿತವಾಗಿದೆ.
ಆನಗೋಡು ಬೆಸ್ಕಾಂ ಸಿಬ್ಬಂದಿ ಅಲ್ಲೇ ಓಡಾಡಿದರು, ಸರಿಪಡಿಸುವ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಮತ್ತು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಂಬಂಧಿಸಿದ ಬೆಸ್ಕಾಂ ಅಧಿಕಾರಿಗಳು ಮುಂದೆ ಆಗುವ ಅನಾಹುತ ತಪ್ಪಿಸಿ, ಬೀಳುವ ಸ್ಥಿತಿಯ ಕಂಬಗಳನ್ನು ಸರಿಪಡಿಸುವಂತೆ ನೇರಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.