ಹೊನ್ನಾಳಿಯಲ್ಲಿ ಜ್ಞಾನ ಲೋಕ ಭಂತೇಜಿ ಗುರುಗಳ ನೇತೃತ್ವದಲ್ಲಿ 2568ನೇ ಅರ್ಥಪೂರ್ಣ ಬುದ್ಧ ಜಯಂತಿ
ಹೊನ್ನಾಳಿ, ಮೇ 23- ಒಳ್ಳೆಯದನ್ನು ಮಾತಾಡುವುದು ಮತ್ತು ಕೇಳಿಸಿಕೊಳ್ಳುವುದರ ಜತೆಗೆ ಇತರರಿಗೆ ಒಳ್ಳೆಯದನ್ನು ಬಯಸುವುದೂ ಪುಣ್ಯದ ಕೆಲಸವೆಂದು ಬೆಂಗಳೂರಿನ ದೇವನಹಳ್ಳಿಯ ಜ್ಞಾನ ಲೋಕ ಭಂತೇಜಿ ಗುರುಗಳು ಹೇಳಿದರು.
ಪಟ್ಟಣದ ಟಿ.ಬಿ. ವೃತ್ತದ ಸರ್ಕಾರಿ ನೌಕರರ ಭವನದಲ್ಲಿ ವೈಶಾಖ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ 2568ನೇ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೂಜೆ ಮಾಡಿಸಿಕೊಳ್ಳುವ ಅರ್ಹತೆಯಿದ್ದ ವರಿಗೆ ಮಾತ್ರ ಪೂಜೆ ಮಾಡುವುದು ಉತ್ತಮ ಎಂದು ಮಾರ್ಮಿಕವಾಗಿ ನುಡಿದ ಅವರು, ಸತ್ಸಂಗದಲ್ಲಿದ್ದು ಆರೋಗ್ಯವನ್ನು ಕಾಪಾಡಿ ಕೊಳ್ಳಬೇಕೆಂದು ಸಲಹೆ ನೀಡಿದರು.
ದಿನಕ್ಕೆ 3 ಬಾರಿ ಪ್ರಾರ್ಥನೆ ಮಾಡುವುದನ್ನು ರೂಢಿಸಿಕೊಂಡರೆ ಬೆನ್ನು ಮತ್ತು ಮಂಡಿ ನೋವು ಬರುವುದಿಲ್ಲ. ಮನಸ್ಸಿನಿಂದ ಮನಸ್ಸಿಗೆ ಪುಣ್ಯ ಹೋಗುತ್ತದೆ ಆದ್ದರಿಂದ ಪಂಚಶೀಲ ತತ್ವ ಪಾಲನೆಯಿಂದ ಎಲ್ಲರಿಗೂ ಒಳಿತಾಗಲಿದೆ ಎಂದು ಹೇಳಿದರು.
ವಿಶ್ವದೆಲ್ಲೆಡೆ ಬುದ್ಧನ ಮಂದಿರಗಳಿದ್ದು, ವಿದೇಶದಲ್ಲಿನ ಬೌದ್ಧ ಮಂದಿರಗಳಿಗೆ ಹೋದಾಗ ಬುದ್ಧನ ಜನ್ಮಭೂಮಿಯಿಂದ ಬಂದಿದ್ದೀರಿ ಎಂದು ಗೌರವಾಧರಗಳಿಂದ ಸತ್ಕರಿಸುತ್ತಾರೆ ಮತ್ತು ಬೀಳ್ಕೊಡುಗೆ ನೀಡುವಾಗ ಅಶ್ರುತರ್ಪಣದ ಮೂಲಕ ಕಳುಹಿಸಿಕೊಡುತ್ತಾರೆ ಎಂದು ವಿವರಿಸಿದರು.
ಉಪನ್ಯಾಸಕ ಬೆನಕನಹಳ್ಳಿ ಮೋಹನ್ ಕುಮಾರ್ ಮಾತನಾಡಿ, ಬೌದ್ಧ ಧರ್ಮ ಧರ್ಮವಲ್ಲ ಅದೊಂದು ಅಧ್ಯಾತ್ಮಿಕ ಜೀವನದ ಮಾರ್ಗವಾಗಿದ್ದು, ಮಾನವರೆಲ್ಲರು ಜೀವನದಲ್ಲಿ ಸುಖ, ಶಾಂತಿ, ಸಂಪತ್ತು ಮತ್ತು ಆರೋಗ್ಯಭಾಗ್ಯ ಕಂಡುಕೊಳ್ಳುವ ಏಕೈಕ ಮಾರ್ಗವೆಂದು ಎಂದು ತಿಳಿಸಿದರು.
ಪ್ರತಿ ವರ್ಷ ಮನೆಗಳಲ್ಲಿ ಆಚರಿಸುತ್ತಿದ್ದ ಬುದ್ಧ ಪೂರ್ಣಿಮೆಯನ್ನು ಈ ವರ್ಷ ವಿಶೇ ಷವಾಗಿ ಎಲ್ಲರೂ ಒಂದೆಡೆ ಸೇರಿ ಗುರುಗಳ ಸಾನ್ನಿಧ್ಯದಲ್ಲಿ ಆಚರಿಸುತ್ತಿದ್ದೇವೆ. ಆದ್ದರಿಂದ ಎಲ್ಲರೂ ಸತ್ಯದ ಮಾರ್ಗದಲ್ಲಿ ಹೋಗ ಬೇಕೆಂದು ಕೃಷ್ಣಪ್ಪ ಕುಂಕುವ ಕರೆ ನೀಡಿದರು.
ಧಮ್ಮಾಚಾರಿ ಅಂಬೇಡ್ಕರ್ ಬೌದ್ಧ ಸಭೆಗೆ, ಜ್ಞಾನ ಲೋಕ ಭಂತೇಜಿ ಗುರುಗಳ ಪರಿಚಯ ಮಾಡಿಕೊಟ್ಟರು. ಮಂಜಪ್ಪ ನರಸಗೊಂಡನಹಳ್ಳಿ ಬುದ್ಧ ಗೀತೆ ಹಾಡಿದರು. ಶಿಕ್ಷಕ ಸುರೇಶ್ ಸ್ವಾಗತಿಸಿದರು. ಆರ್. ಕುಬೇರ ನಿರೂಪಿಸಿದರು. ಸಂತೋಷ್ ಕುಂಕೋವ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ಧಮ್ಮಾಚಾರಿ ಶೇಖರ್ ನಾಯ್ಕ್, ಆರ್. ನಾಗಪ್ಪ, ಎ.ಕೆ. ಚನ್ನೇಶ್ವರ್, ರುದ್ರೇಶ್, ಸಂತೋಷ್, ಪ್ರದೀಪ್, ರಘು, ಹಳದಪ್ಪ, ವೆಂಕಟೇಶ್, ರುದ್ರೇಶ್ ಮತ್ತಿತರರಿದ್ದರು.