ಜಗಳೂರು, 23- ಮಾಜಿ ಸಚಿವ ಎಚ್. ಆಂಜನೇಯ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡುವ ಜತೆಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಬೇಕೆಂದು ಹಿರಿಯ ದಲಿತ ಮುಖಂಡ ಜಿ.ಎಚ್. ಶಂಭುಲಿಂಗಪ್ಪ ಒತ್ತಾಯಿಸಿದರು.
ಪಟ್ಟಣದ ಆದಿ ಜಾಂಭವ ವಿದ್ಯಾರ್ಥಿ ನಿಲಯ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2013ರಿಂದ 2018ರ ವರೆಗೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ 5 ವರ್ಷ ಕಾರ್ಯ ನಿರ್ವಹಿಸಿ ರಾಜ್ಯಾದ್ಯಂತ ಎಸ್‌ಇಪಿ, ಟಿಎಸ್‌ಪಿ ಯೋಜನೆ ಜಾರಿಗೊಳಿಸಿ, ಐತಿಹಾಸಿಕ ಸಾಧನೆ ಮಾಡಿದ್ದಾರೆ ಎಂದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಆಕಸ್ಮಿಕ ಸೋಲಿನಿಂದ ದಲಿತ ಸಮಾಜಕ್ಕೆ ಅಪಾರ ನೋವಾಗಿದೆ. ಮಾದಿಗ ಸಮಾಜ ಸದಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಈ ಬಾರಿ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಗುತ್ತಿದುರ್ಗ ರುದ್ರೇಶ್ ಮಾತನಾಡಿ, ರಾಜ್ಯದಲ್ಲಿ ಪಕ್ಷ ಕಟ್ಟಿ ಸಂಘಟಿಸುವ ಶಕ್ತಿ ಎಚ್. ಆಂಜನೇಯ ಅವರಿಗಿದೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ, ಎಚ್.ಎನ್. ಶಿವಕುಮಾರ್, ಪಾಪಣ್ಣ, ಪಲ್ಲಾಗಟ್ಟೆ ಶೇಖರಪ್ಪ, ಮಾರುತಿ, ಯುವ ಮುಖಂಡರಾದ ಮರೇನಹಳ್ಳಿ ತಿಪ್ಪೇಸ್ವಾಮಿ, ಮಂಜುನಾಥ್, ಹನುಮಂತಪ್ಪ, ಮಲೆ ಮಾಚಿಕೆರೆ ಸತೀಶ್ ಮತ್ತಿತರರಿದ್ದರು.