ದಾವಣಗೆರೆ, ಮೇ 21- ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಭಯೋತ್ಪಾದಕ ವಿರೋಧಿ ದಿನದ ಪ್ರಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು, ಎಲ್ಲ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮೆಲ್ಲ ಶಕ್ತಿ, ಸಾಮರ್ಥ್ಯದಿಂದ ಎದುರಿಸುತ್ತೇವೆ. ನಮ್ಮ ಸಹಬಾಂಧವರಲ್ಲಿ ಶಾಂತಿ, ಸಾಮಾಜಿಕ ಸೌಹಾರ್ದತೆ ಮತ್ತು ಪರಸ್ಪರ ಅರಿವನ್ನು ಸಾಧಿಸಲು ಹಾಗೂ ಉತ್ತೇಜಿಸಲು, ಮಾನವ ಜೀವಕ್ಕೆ ಹಾಗೂ ಮೌಲ್ಯಗಳಿಗೆ ಬೆದರಿಕೆ ಒಡ್ಡುತ್ತಿರುವ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ದ ಹೋರಾಡಲು ಪಣ ತೊಡುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರಿನ್ ಭಾನು ಎಸ್.ಬಳ್ಳಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸಿದ್ದರಾಮ್ ಮಾರಿಹಾಳ್, ಡಿಡಿಎಲ್‍ಆರ್ ಭಾವನಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.