ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಅಂತರರಾಷ್ಟ್ರೀಯ ಮನ್ನಣೆ

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಅಂತರರಾಷ್ಟ್ರೀಯ ಮನ್ನಣೆ

ಪ್ರಸ್ತುತ ಸಾಲಿನಲ್ಲಿ 3 ಸಾವಿರ ಕೋಟಿ ದಾಟಿದ ವಹಿವಾಟು; 20 ಕೋಟಿ ಸೆಸ್ ಸಂಗ್ರಹ

ಬ್ಯಾಡಗಿ, ಮೇ 21-   ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆ ವಹಿವಾಟು  ಆರಂಭಿಕ ವರ್ಷ 1952ರಲ್ಲಿ  ಕೇವಲ ನೂರಾರು ಕೋಟಿಯಷ್ಟಿತ್ತು. ಇಂದು ಮೂರು ಸಾವಿರ ಕೋಟಿಗೂ ಅಧಿಕವಾಗಿದೆ. ಸೆಸ್ ಸಂಗ್ರಹವೇ 20 ಕೋಟಿ ಸಮೀಪಿಸುವಂತಾಗಿದ್ದು, ವಿಶ್ವದಲ್ಲಿಯೇ ಪ್ರಮುಖ ಮಾರುಕಟ್ಟೆಯಾಗಿ ಮನ್ನಣೆ ಪಡೆಯುವಂತಾಗಿದೆ.

ಕಳೆದ ವರ್ಷ 2287 ಕೋಟಿ ರೂ.ಗಳ ವಹಿವಾಟು ನಡೆದು, 13.72 ಕೋಟಿ ರೂ. ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದೆ. ಅಲ್ಲಲ್ಲಿ ನಿಸರ್ಗ ವಿಕೋಪದಿಂದ ಬರದ ಛಾಯೆ ಆವರಿಸಿದ್ದರೂ ಸಹ ಈ ವರ್ಷ 3187 ಕೋಟಿಯಷ್ಟು ವಹಿವಾಟು ನಡೆಸಿದ್ದು, 19.12 ಕೋಟಿ ಸೆಸ್ ಸಂಗ್ರಹವಾಗಿದೆ. ಕಳೆದ ವರ್ಷ 32 ಲಕ್ಷಕ್ಕೂ ಅಧಿಕ ಚೀಲಗಳು ಅಂದರೆ 10 ಲಕ್ಷ ಕ್ವಿಂಟಾಲ್  ಅವಕ ಆಗಿತ್ತು. ಈ ವರ್ಷ 52 ಲಕ್ಷ  ಚೀಲಗಳು ಅಂದರೆ 17.9 ಲಕ್ಷ ಕ್ವಿಂಟಾಲ್ ಮೆಣಸಿನಕಾಯಿ ಅವಕವಾಗಿದೆ

ಕೇವಲ ಅಡುಗೆಗೆ ಬಳಕೆಯಾಗುತ್ತಿದ್ದ ಮೆಣಸಿನ ಕಾಯಿ ಕಳೆದ 3 ದಶಕಗಳಿಂದೀಚೆಗೆ ಅದರಲ್ಲಿನ ನೈಸರ್ಗಿಕ ಬಣ್ಣವನ್ನು  ದೇಶ-ವಿದೇಶಗಳಲ್ಲಿ ವಿವಿಧ ಉತ್ಪನ್ನಗಳಿಗೆ ಬಳಸಲಾಗುತ್ತಿದೆ. ಮಾರುಕಟ್ಟೆ ಹಾಗೂ ಪಟ್ಟಣದ ಹೊರವಲಯದಲ್ಲಿ ಮೆಣಸಿನಕಾಯಿಗೆ ಪೂರಕವಾದ ಓಲಿಯೋರೀಜನ್ ಮತ್ತು ಚಿಲಿ ಪೌಡರ್ ತಯಾರಿಸುವ  ಉದ್ಯಮಗಳು ಹಾಗೂ ಕೋಲ್ಡ್ ಸ್ಟೋರೇಜ್‌ಗಳಿವೆ. ಇದೊಂದು  ಬೃಹತ್ ಉದ್ಯಮವಾಗಿ ಹೊರಹೊಮ್ಮಿದ್ದು, ವರ್ಷದಿಂದ ವರ್ಷಕ್ಕೆ ವಹಿವಾಟು ಹೆಚ್ಚಾಗುತ್ತಿದೆ.

ಇ-ಟೆಂಡರ್ ಪದ್ದತಿ ವ್ಯಾಪಾರ, ಪಾರದರ್ಶಕ ತೂಕ, ಸ್ಪರ್ಧಾತ್ಮಕ ದರ, ಎಷ್ಟೇ ಮೆಣಸಿನಕಾಯಿ  ಅವಕವಾದರೂ ಅಂದೇ ಮಾರಾಟ ಮಾಡಿ ಹಣ ರೈತರಿಗೆ ಕೊಡುವ ವ್ಯವಸ್ಥೆಯ ಬ್ಯಾಡಗಿ ಮಾರುಕಟ್ಟೆ ಬಗ್ಗೆ ಆತ್ಮವಿಶ್ವಾಸವಿದ್ದು, ಆಂಧ್ರಪ್ರದೇಶದ ಆದೋನಿ, ಕರ್ನೂಲ್, ಶ್ರೀ ಶೈಲಂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ಬೆಳೆ ತರುತ್ತಿದ್ದಾರೆ. ಅದರಿಂದಾಗಿ ಬ್ಯಾಡಗಿ ಮೆಣಸಿನ ಕಾಯಿ ಮಾರುಕಟ್ಟೆ ಅಂತರರಾಷ್ಟ್ರೀಯ ಮನ್ನಣೆ ಗಳಿಸುವಂತಾಗಿದೆ.

4 ನೂರು ದಲ್ಲಾಲರ ಅಂಗಡಿಗಳು, 3 ನೂರು ಖರೀದಿದಾರರು,  28 ಕೋಲ್ಡ್ ಸ್ಟೋರೇಜ್ ಜೊತೆಗೆ  ಇನ್ನಿತರೆ ಪೂರಕ ಉದ್ಯೋಗಗಳು ಸೇರಿದಂತೆ,  ಸುಮಾರು 25 ಸಾವಿರದಷ್ಟು ಕುಟುಂಬಗಳ ಬದುಕು ಕಟ್ಟಿಕೊಟ್ಟ ಮಾರುಕಟ್ಟೆ ಇದಾಗಿದೆ ಎನ್ನಬಹುದು.

error: Content is protected !!