ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಕಾರ್ಯಕ್ರಮದಲ್ಲಿ ಯುಬಿಡಿಟಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾ. ಕೆ.ಎಸ್. ಶ್ರೀಧರ್ ಅಭಿಮತ
ದಾವಣಗೆರೆ ಮೇ 21 – ದಶಕಗಳ ಕೆಳಗೆ ಕಂಪ್ಯೂಟರ್ ಬಂದಾಗ ಉದ್ಯೋಗಗಳೇ ನಿರ್ಮೂಲನೆಯಾಗುತ್ತವೆ ಎಲ್ಲರೂ ಹೆದರಿದರು, ಆದರೆ ಕಂಪ್ಯೂಟರ್ ಕ್ಷೇತ್ರವೇ ದೊಡ್ಡ ಉದ್ದಿಮೆಯಾಗಿ ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದೆ, ಮುಂದೆ ಕೃತಕ ಬುದ್ಧಿಮತ್ತೆಯೂ ಹೀಗೇ, ಆದ್ದರಿಂದ ನಾಳಿನ ತಂತ್ರಜ್ಞಾನಕ್ಕೆ ನಾವಿಂದೇ ಸಿದ್ಧರಾಗಬೇಕು ಎಂದು ಯುಬಿಡಿಟಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಕೆ.ಎಸ್. ಅಭಿಪ್ರಾಯ ಪಟ್ಟರು.
ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್‌ನಲ್ಲಿ ನಿನ್ನೆ ಏರ್ಪಾಡಾಗಿದ್ದ `ಕೃತಕ ಬುದ್ಧಿಮತ್ತೆಯ ಭವಿಷ್ಯ’ ಕುರಿತಾದ ರಾಜ್ಯಮಟ್ಟದ ವಿಚಾರ ಸಂಕಿರಣ `ಪ್ರಜ್ಞಾ’ದ ಸಮರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಸಮಾರೋಪ ಭಾಷಣ ಮಾಡಿದರು.
ಕೃತಕ ಮೆದುಳನ್ನು ನಿರ್ಮಾಣ ಮಾಡುವ 1980ರ ಪ್ರಯತ್ನ ವಿಫಲವಾದರೂ ಈಗ ಅದು ಕೃತಕ ಬುದ್ಧಿಮತ್ತೆಯ ಮೂಲಕ ಸಾಧ್ಯವಾಗುವ ಸಂದರ್ಭ ಬಂದಿದೆ. ಅಂಪೈರ್ ಗಿಂತ ನಿಖರವಾಗಿ ಕ್ಯಾಮರಾಗಳು ತೀರ್ಪು ಹೇಳುತ್ತಿವೆ, ಶಿಕ್ಷಕರ ಜಾಗದಲ್ಲಿ ಮುಂದೆ ರೋಬೋಟ್ ಗಳೇ ಬರಬಹುದು, ನಮ್ಮ ಹೃದಯದಲ್ಲಿ ಏನಾದರೂ ವ್ಯತ್ಯಾಸವಾದರೆ ನಮ್ಮ ಅರಿವಿಗೆ ಬರುವ ಮೊದಲೇ ನಮ್ಮ ಡಾಕ್ಟರ್ ಗೆ ಅದರ ಮಾಹಿತಿ ಹೋಗುವ ಕಾಲವೂ ದೂರವಿಲ್ಲ.ಏನೇ ಆದರೂ ಕೃತಕ ಬುದ್ಧಿಮತ್ತೆಯು ಪ್ರಕೃತಿದತ್ತವಾದ ನಮ್ಮ ಮೆದುಳಿನ ಕೂಸೇ ಎಂಬುದನ್ನು ತಿಳಿದಾಗ ಆತಂಕ ಇರುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಪ್ರಾಂಶುಪಾಲ ಡಾ. ಬಿ. ವೀರಪ್ಪ ಅವರು ಮಾತನಾಡಿ, ಭಾರತವು ಪ್ರತಿಭಾವಂತ ತಂತ್ರಜ್ಞಾನಿಗಳ ಕ್ಷೇತ್ರವೆಂಬಂತಾಗಿದೆ ಎಂದರು.
ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಹೆಚ್.ವಿ. ಅವರು ಕಾರ್ಯ ಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದರ್ಶನ್ ಪಾಟೀಲ್ ಮತ್ತು ಅಲ್ಫೀಸಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಯನ್ನು ಸೌಜನ್ಯ, ಆದಿತ್ಯ, ಸಂಜನಾ ಹಾಡಿದರು.
ಅನಿಲ್ ಅತ್ತರ್ ಸ್ವಾಗತಿಸಿದರು. ಎಂ.ಕೆ. ಸ್ಪೂರ್ತಿ ವಿಚಾರ ಸಂಕಿರಣ ವರದಿ ವಾಚಿಸಿದರು. ಅಕಿಲ್ ಅನ್ರ ಹಾಗೂ ಉಜ್ಮಾ ನಾಜ್ ಅತಿಥಿ ಪರಿಚಯ ಮಾಡಿದರು. ಪ್ರೊ. ಬಿ.ವಿ. ಶ್ವೇತಾ ವಂದಿಸಿದರು.
ತೀರ್ಪುಗಾರರಾಗಿ ಡಾ. ಜಿ.ವೈ. ವಿಶ್ವನಾಥ್, ಪಿ. ಪ್ರತಿಮಾ, ಪ್ರೊ. ಬಿ.ಎಸ್. ನಾಗರಾಜ್, ಪ್ರೊ. ಎಸ್. ಸರೋಜಾ, ಪಿ. ಉಮಾ ಮಹೇಶ್ವರಪ್ಪ, ಪ್ರೊ. ಕೆ.ಎಸ್. ವಿಜಯ್, ಡಾ. ಜಿ.ಎಸ್. ವಿದ್ಯಾ, ಡಾ. ಕೆ.ಎಸ್. ಚೈತ್ರಾ, ಡಾ. ಎಂ. ಶೃತಿ, ಡಾ. ಎ.ಜೆ. ನೀತಾ ಕಾರ್ಯಕ್ರಮ ನಿರ್ವಹಿಸಿದರು.