ಆಸ್ಪತ್ರೆಯಿಂದ ನೇರವಾಗಿ ಮಾಕನೂರಿನ ಯೂನಿಯನ್ ಬ್ಯಾಂಕ್ ಬಾಗಿಲಲ್ಲಿ ಮಲಗಿ ಪ್ರತಿಭಟಿಸಿದ ರೈತ
ರಾಣೇಬೆನ್ನೂರು, ಮೇ 21 – ತಾನು ಸುಮಾರು 15 ವರ್ಷಗಳ ಹಿಂದೆ ಮಾಡಿದ್ದ ಸಣ್ಣ ಪ್ರಮಾಣದ ಸಾಲವೀಗ, ಬ್ಯಾಂಕಿನವರು ಅದರ ಅವಶ್ಯಕತೆಗೆ ರೈತನ ಗಮನಕ್ಕೆ ತಾರದೇ ಮಾಡಿದ ರಿಸ್ಟ್ರಕ್ಟರ್‍ನಂಥ ತಪ್ಪಿನಿಂದಾಗಿ ದೊಡ್ಡ ಸಾಲವಾಗಿದೆ. ಬ್ಯಾಂಕಿನವರ ಈ ತೀರ್ಮಾನದಿಂದ ಆ ರೈತನಿಗೆ ಓಟಿಎಸ್ ಯೋಜನೆಯೂ ಸಿಗದೇ ಸಾಲ ಮನ್ನಾ ಯೋಜನೆಯ 2 ಲಕ್ಷ ರೂ. ಲಾಭವೂ ದೊರಕಿಲ್ಲ. ಆ ಸಾಲವನ್ನು ಓಟಿಎಸ್ ಯೋಜನೆಗೆ ಒಳಪಡಿಸಿದರೆ ನಾನು ಮರುಪಾವತಿ ಮಾಡಿ ಋಣಮುಕ್ತನಾಗಿ ಪ್ರಾಣ ಬಿಡುತ್ತೇನೆಂದು ಕ್ಯಾನ್ಸರ್ ಪೀಡಿತ, ಇಂದೋ – ನಾಳೆ ಪ್ರಾಣ ಬಿಡುವ ಸ್ಥಿತಿಯಲ್ಲಿರುವ ರೈತ ಆಸ್ಪತ್ರೆಯಿಂದ ನೇರವಾಗಿ ಬಂದು ಮಾಕನೂರಿನ ಯೂನಿಯನ್ ಬ್ಯಾಂಕ್ ಬಾಗಿಲಲ್ಲಿ ಮಲಗಿರುವುದನ್ನು ನೋಡಿದರೆ ರೈತನ ಗುಣಧರ್ಮವೇ ಅಂಥದ್ದು ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು.
ಇಂದು ಈ ಘಟನೆ ನಡೆದ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ರೈತನ ಕುಟುಂಬಸ್ಥರು ಮತ್ತು ರೈತರು ಹಾಗೂ ಬ್ಯಾಂಕ್ ಸಿಬ್ಬಂದಿ, ಮಾಧ್ಯಮ ಮಿತ್ರರು, ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ರೈತಾಪಿ ವರ್ಗ ಅತಿವೃಷ್ಟಿ, ಅನಾವೃಷ್ಟಿ, ಕೊರೊನಾ, ಲಾಕ್‍ಡೌನ್, ಅಗತ್ಯ ವಸ್ತುಗಳ ಬೆಲೆ ಏರಿಕೆ, ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಇರುವುದರಿಂದ ಆರ್ಥಿಕವಾಗಿ ಜರ್ಝರಿತನಾಗಿದ್ದಾನೆ.
ಕೆಲವರು ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವವರು ಇದೇ ರೀತಿ ಏನೇ ಕಷ್ಟ ಕಾರ್ಪಣ್ಯಗಳು ಬಂದರೂ ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಿ ಋಣಮುಕ್ತನಾಗಬೇಕೆಂದು ಹೆಣಗಾಡಿ ಹೆಣಗಾಡಿ ಸಾಲ ಮರುಪಾವತಿಸುತ್ತಾರೆ.
ಕೋಟಿ ಕೋಟಿ ಸಾಲ ಮಾಡಿ ಬ್ಯಾಂಕಿಗೆ ಮತ್ತು ಸರ್ಕಾರಕ್ಕೆ ವಂಚಿಸಿ ವಿದೇಶಕ್ಕೆ ಪಾರಾಗುವ ವಿಜಯ್ ಮಲ್ಯ, ನೀರವ್ ಮೋದಿಯಂಥ ದೊಡ್ಡ ದೊಡ್ಡ ಉದ್ಯಮಿಗಳಿಗೂ, ಜೀವ ಬಿಡುವ ಮುನ್ನವೂ ಸಾಲ ಮರುಪಾವತಿಸಿ ಋಣಮುಕ್ತನನ್ನಾಗಿ ಜೀವ ಬಿಡಬೇಕೆನ್ನುವ ಸ್ವಾಭಿಮಾನಿ ಇಂಥ ರೈತನಿಗೂ ಇರುವ ವ್ಯತ್ಯಾಸ ಎಂದ ಪಾಟೀಲರು, ಇಂಥ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮಧ್ಯೆ ಪ್ರವೇಶಿಸಬೇಕೆಂದರು.
ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎ.ಜಿ.ಎಂ. ಕೆ. ಭೈರೇಗೌಡ, ಚೀಪ್ ಮ್ಯಾನೇಜರ್ ಮೋಹನ್‍ಕುಮಾರ್, ಈ ಘಟನೆಯಲ್ಲಿ ಏನಾದರೂ ಅವಘಡವಾದರೆ ಅದರ ಹೊಣೆ ಅವರದ್ದೇ ಎಂದರು.
ಈ ಸಂದರ್ಭದಲ್ಲಿ ಚಂದ್ರಣ್ಣ ಬೇಡರ, ರೇವಣ್ಣ ಬಾರ್ಕಿ, ಭೀಮಶಿ ಕೂಲಿ, ನಿಗರೆಡ್ಡಿ ಅಂತ್ರವಳ್ಳಿ, ಸುರೇಶ ಮಲ್ಲಾಪುರ, ಹರಿಹರಗೌಡ ಪಾಟೀಲ, ನಾಗನಗೌಡ ಮುದಿಗೌಡ್ರ, ಚನ್ನಪ್ಪ ದೊಡ್ಡಮನಿ, ಬಸವರಾಜ ಯಲ್ಲಕ್ಕನವರ, ವಿರುಪಾಕ್ಷಗೌಡ ಪಾಟೀಲ, ಕೆಂಚಪ್ಪ ಮುಷ್ಟೂರುನಾಯ್ಕ, ಯಲ್ಲಪ್ಪ ಓಲೇಕಾರ, ಮಾದೇವಪ್ಪ ಕುಸಗೂರು, ಶ್ರೀಕಾಂತ ಪಾಟೀಲ, ಹಾಲೇಶ ಕೆಂಚಣ್ಣನವರ ಮುಂತಾದ ಮುಖಂಡರು ಭಾಗವಹಿಸಿದ್ದರು.
ಬ್ಯಾಂಕ್ ವ್ಯವಸ್ಥಾಪಕ ಆತುಲ್‍ಸಿಂಗ್ ಮಾತನಾಡಿ, 3 ದಿನಗಳೊಳಗಾಗಿ ರೀಜಿನಲ್ ಕಛೇರಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆಂದು ಭರವಸೆ ಕೊಟ್ಟ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.