ಸಾಲಕ್ಕೆ ಸಬ್ಸಿಡಿ ಹಣ ಜಮೆ : ರೈತರ ಪ್ರತಿಭಟನೆ

ಸಾಲಕ್ಕೆ ಸಬ್ಸಿಡಿ ಹಣ ಜಮೆ : ರೈತರ ಪ್ರತಿಭಟನೆ

ದಾವಣಗೆರೆ, ಮೇ 20- ಸಾಲದ ಹಣಕ್ಕೆ ಸಾಮಾಜಿಕ ಭದ್ರತೆ ಸೇರಿದಂತೆ, ವಿವಿಧ ಸಬ್ಸಿಡಿ ಹಣ ಜಮೆ ಮಾಡಿಕೊಂಡಿದ್ದ ಆನಗೋಡು ಗ್ರಾಮದ ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮೇನೇಜರ್ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಸೋಮವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ‌ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ತಾಲ್ಲೂಕಿನ ಹೊನ್ನೂರು ಗ್ರಾಮದ ನಾಗಮ್ಮ ಕೋಂ ರಮೇಶ್ ಎಂಬ ಮಹಿಳೆ ಅಂಗವಿಕಲರ ಕಲ್ಯಾಣ ಇಲಾಖೆಯಿಂದ 35 ಸಾವಿರ ರೂ ಸಹಾಯಧನ, 65 ಸಾವಿರ ರೂ ಸಾಲ ಸೇರಿದಂತೆ 1 ಲಕ್ಷ ಪಡೆದಿದ್ದು, ಈಗಾಗಲೇ 50 ಸಾವಿರ ಸಾಲ ಮರುಪಾವತಿ ಮಾಡಿದ್ದಾರೆ. ಉಳಿದ 15 ಸಾವಿರ  ಹಣವನ್ನು ಕಾರಣಾಂತರದಿಂದ ಕಟ್ಟಲು ಆಗಿಲ್ಲ. ಈ ಹಣಕ್ಕೆ ಈಗಾಗಲೇ ಅವರ ಖಾತೆಯಲ್ಲಿದ್ದ ಉದ್ಯೋಗ ಖಾತ್ರಿ, ಗೃಹ ಲಕ್ಷ್ಮಿ, ಅಂಗವಿಕಲರ ವೇತನ ಇತರೆ ಎಲ್ಲ ಬಗೆಯ ಸಬ್ಸಿಡಿ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಾಲ ಕಟ್ಟುವುದಾಗಿ ತಿಳಿಸಿದರೂ ಮೇನೇಜರ್ ಸ್ಪಂದಿಸಿಲ್ಲ  ಎಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅಶ್ವತ್ಥ್‌ ಅವರು, ಲೀಡ್‌ ಬ್ಯಾಂಕ್ ವ್ಯವಸ್ಥಾಪಕರನ್ನು ಧರಣಿ ಸ್ಥಳಕ್ಕೆ ಕರೆಯಿಸಿ ಪ್ರಕರಣ ಕುರಿತು ಹೇಳಿ, ‌ಮುಟ್ಟು ಗೋಲು ‌ಹಾಕಿ ಕೊಂಡಿರುವ ಹಣವನ್ನು ಕೂಡಲೇ ನಾಗಮ್ಮ ಅವರ ಖಾತೆಗೆ ಜಮೆ ಮಾಡುವಂತೆ ತಾಕೀತು ಮಾಡಿದರು.

ಇದನ್ನು ವಿರೋಧಿಸಿದ ಪ್ರತಿಭಟನಾಕಾರರು,‌ ಬ್ಯಾಂಕ್ ಮೇನೇಜರ್  ಧರಣಿ ಸ್ಥಳಕ್ಕೆ ಬಂದು‌‌ ತಹಶಿಲ್ದಾರರ ‌ಕಚೇರಿ ಮುಂದೆಯೇ  ನಾಗಮ್ಮ ಅವರಿಗೆ ಹಣ ನೀಡಬೇಕೆಂದು ಪಟ್ಟು ‌ಹಿಡಿದರು. ಇದಕ್ಕೆ ಒಪ್ಪಿದ ಬ್ಯಾಂಕ್ ಮೇನೆಜರ್ 35 ಸಾವಿರ ಹಣದೊಂದಿಗೆ ಆಗಮಿಸಿ ನಾಗಮ್ಮ ಅವರಿಗೆ ನೀಡಿದರು.

ಸಾಮಾಜಿಕ ಭದ್ರತೆ ಸೇರಿದಂತೆ ಯಾವುದೇ ಬಗೆಯ ಯೋಜನೆ ಅಥವಾ ಸಬ್ಸಡಿ ಹಣವನ್ನು ಸಾಲದ ಖಾತೆಗೆ ಜಮೆ ಮಾಡದಂತೆ ಜಿಲ್ಲೆಯ ಎಲ್ಲ ಬ್ಯಾಂಕ್ ಗಳಿಗೆ ನಿರ್ದೇಶನ ನೀಡುವಂತೆ ತಹಶಿಲ್ದಾರ್ ಅಶ್ವಥ್ ಅವರು ಲೀಡ್ ಬ್ಯಾಂಕ್ ಮೇನೆಜರ್ ಗೆ ಮೌಖಿಕವಾಗಿ ಸೂಚಿಸಿದರು.

ಪ್ರತಿಭಟನೆಯಲ್ಲಿ ಆಲೂರು ಪರಶುರಾಂ, ಗಂಡುಗಲಿ, ಯರವನಾಗತಿಹಳ್ಳಿ ಪೂಜಾರ ಪರಮೇಶ್ವರಪ್ಪ, ಗುಮ್ಮನೂರು ರುದ್ರೇಶ್, ಭೀಮೇಶ್, ಶಿವಪುರ ಕೃಷ್ಣಮೂರ್ತಿ, ಚಿಕ್ಕಮಲ್ಲನಹೊಳೆ ಚಿರಂಜೀವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು

error: Content is protected !!