ಹೊನ್ನಾಳಿ, ಮೇ 19- ಕಮ್ಮಾರಘಟ್ಟೆಯ ಪೋದಾರ್ ಲರ್ನ್ ಶಾಲೆಯ ಹತ್ತಿರ ಬೈಕ್ ಸವಾರ ಭಾನುವಾರ ಸಂಜೆ ಅಪಘಾತದಿಂದ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಎಚ್ಚರ ತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದನ್ನು ಗಮನಿಸಿದ ಹೊನ್ನಾಳಿ ಪಟ್ಟಣದ ಗೋಪಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೋರಿ ಯೋಗೀಶ್ ಕುಳಗಟ್ಟೆ, ಮಾಜಿ ಅಧ್ಯಕ್ಷ ಹೆಚ್.ಸಿ.ಮೃತ್ಯುಂಜಯ ಪಾಟೀಲ್, ಶ್ರೀಧರ್, ಕುಮಾರ್ ಬೆನಕನಹಳ್ಳಿ ಅವರುಗಳು ಅಪಘಾತದಿಂದ ತೀವ್ರತರನಾಗಿ ಗಾಯಾಳುವಾಗಿದ್ದ ವ್ಯಕ್ತಿಯನ್ನು ಕುಳ್ಳಿರಿಸಿ ಉಪಚರಿಸಿದರು.
ಅಪಘಾತವಾಗಿದ್ದ ವ್ಯಕ್ತಿ ಗೊಲ್ಲರಹಳ್ಳಿಯ ಟೈಲ್ಸ್ ಕೆಲಸ ಮಾಡುತ್ತಿದ್ದ ದಾದಾಪೀರ್ ಎಂದು ಪತ್ತೆ ಮಾಡಿ ಸಂಬಂಧಪಟ್ಟವರಿಗೆ ಮಾಹಿತಿ ತಿಳಿಸಲಾಯಿತು.
ಸಂಜೆ 6 ಗಂಟೆ 7 ನಿಮಿಷಕ್ಕೆ ಆಂಬ್ಯುಲೆನ್ಸ್‍ಗೆ ಕರೆ ಮಾಡಿದರೆ, ಆಂಬ್ಯುಲೆನ್ಸ್ ಸಾಸ್ವೆಹಳ್ಳಿಯಲ್ಲಿದೆ ಬರುತ್ತೇವೆ ಎಂದು ಮಾಹಿತಿ ನೀಡಿದ್ದರೂ ಕೂಡ 35 ನಿಮಿಷವಾದರೂ ಆಂಬ್ಯುಲೆನ್ಸ್ ಬರುವ ಲಕ್ಷಣಗಳು ಕಾಣದೇ ಇದ್ದಾಗ ಅಪಘಾತವಾಗಿದ್ದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದನ್ನು ಗಮನಿಸಿ, ಆತನ ಕಡೆಯವರೂ ಸ್ಥಳದಲ್ಲೇ ಇದ್ದ ಓಮ್ನಿ ವಾಹನದಲ್ಲಿ ಅಪಘಾತವಾಗಿದ್ದ ವ್ಯಕ್ತಿಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ಸಮಯಕ್ಕೆ ಬಾರದ ಆಂಬ್ಯುಲೆನ್ಸ್ : ತುರ್ತು ಸಂದರ್ಭಗಳಿಗೆಂದೇ ಮೀಸಲಿರುವ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೆ, ಬೇಗ ಬಾರದೇ ನಿರ್ಲಕ್ಷ್ಯ ತೋರಿದೆ. ಆಂಬ್ಯುಲೆನ್ಸ್ ಬರುವುದನ್ನೇ ಕಾಯುತ್ತಿದ್ದರೆ ನಮ್ಮ ಕಡೆಯವರ ಜೀವ ಉಳಿಯುತ್ತಿರಲಿಲ್ಲ. ಸಮಯಕ್ಕೆ ಬಾರದೇ ಅಲಕ್ಷ್ಯ ತೋರಿದ ಆಂಬ್ಯುಲೆನ್ಸ್ ಚಾಲಕನ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಅಪಘಾತವಾಗಿದ್ದ ವ್ಯಕ್ತಿಯ ಕಡೆಯವರು ಒತ್ತಾಯಿಸಿದ್ದಾರೆ.