ಸ್ವಯಂ ವಿದ್ಯುತ್ ರಿಪೇರಿಗೆ ಮುಂದಾಗಬೇಡಿ : ಜಯಪ್ಪ

ಸ್ವಯಂ ವಿದ್ಯುತ್ ರಿಪೇರಿಗೆ ಮುಂದಾಗಬೇಡಿ : ಜಯಪ್ಪ

ಹೊನ್ನಾಳಿ, ಮೇ 19- ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಸಾರ್ವಜನಿಕರು ವಿದ್ಯುತ್ ಸುರಕ್ಷತಾ ಕ್ರಮ ತಪ್ಪದೇ ಪಾಲಿಸಬೇಕೆಂದು ಬೆಸ್ಕಾಂನ ಎಇಇ ಜಯಪ್ಪ ಹೇಳಿದರು.

ಪಟ್ಟಣದ ಬೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಆಯೋಜಿಸಿದ್ದ ಗ್ರಾಹಕರ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ಗುಡುಗು-ಸಿಡಿಲು, ಮಳೆ-ಗಾಳಿಗೆ ವಿದ್ಯುತ್ ಸಂಬಂಧಿತ ಹಲವಾರು ಸಮಸ್ಯೆ  ಉಲ್ಬಣವಾಗುತ್ತವೆ. ಆದ್ದರಿಂದ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಸಮಸ್ಯೆ ಸರಿಪಡಿಸಲು ಮುಂದಾಗಬೇಡಿ ಎಂದು ಮನವಿ ಮಾಡಿದರು.

ವಿದ್ಯುತ್ ಸಮಸ್ಯೆ ಮತ್ತು ವಿತರಣೆಯಲ್ಲಿ ವ್ಯತ್ಯಾಸ ಕಂಡು ಬಂದರೆ ಸಂಬಂಧಿಸಿದ ವಿದ್ಯುತ್ ವಿತರಣಾ ಕೇಂದ್ರ ಮತ್ತು ಶಾಖಾಧಿಕಾರಿಗಳ ನಂಬರ್‌ಗೆ ಕರೆ ಮಾಡಲು ತಿಳಿಸಿದರು.

ಗ್ರಾಹಕರಿಗೆ ವಿದ್ಯುತ್‌ ಸಮಸ್ಯೆಯಾದರೆ ಸಂಬಂಧಪಟ್ಟ ಶಾಖಾಧಿಕಾರಿಗಳಿಗೆ ಲಿಖಿತ ದೂರು ನೀಡಿದರೆ ವಿದ್ಯುತ್‌ ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದು ಹೇಳಿದರು.

ಇಲ್ಲಿನ ಉಪವಿಭಾಗೀಯ ಕಚೇರಿಯಲ್ಲಿ ಪ್ರತಿ ತಿಂಗಳ 3ನೇ ಶನಿವಾರ ವಿದ್ಯುತ್‌ ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ರೈತರು ಮತ್ತು ಗ್ರಾಹಕರ ಸಭೆ ನಡೆಯಲಿದ್ದು, ಸಭೆಯ ಸದುಪಯೋಗ ಪಡೆಯುವಂತೆ ಮಾಹಿತಿ ನೀಡಿದರು.

ಇದೇ ವೇಳೆ ಹನಗವಾಡಿ, ಹೊನ್ನಾಳಿ ಪಟ್ಟಣ ಮತ್ತು ತರಗನಹಳ್ಳಿ ಗ್ರಾಮಗಳ ವ್ಯಾಪ್ತಿಯ 3 ಲಿಖಿತ ದೂರುಗಳು ಮತ್ತು  3 ಮೌಖಿಕ ದೂರುಗಳನ್ನು ಸಭೆಯಲ್ಲೆ ಇತ್ಯರ್ಥ ಪಡಿಸಿದರು.

ತಾಂತ್ರಿಕ ಎಂಜಿನಿಯರ್ ಸತ್ಯನಾರಾಯಣ, ಶಾಖಾಧಿಕಾರಿಗಳಾದ ರವಿಪ್ರಕಾಶ್, ಶಿವರಾಜ್, ರಾಜು, ಕಾಂತರಾಜ್, ಶೇಖರಪ್ಪ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಬೆಸ್ಕಾಂ ಗ್ರಾಹಕರು ಸಭೆಯಲ್ಲಿದ್ದರು.

error: Content is protected !!