‘ಸತ್ಯಾನ್ವೇಷಣೆಯೇ ಜ್ಞಾನ ವಿಜ್ಞಾನದ ಗುರಿ’

‘ಸತ್ಯಾನ್ವೇಷಣೆಯೇ ಜ್ಞಾನ ವಿಜ್ಞಾನದ ಗುರಿ’

ಪ್ರೊ. ಬಿ. ಕೃಷ್ಣಪ್ಪ ಭವನದಲ್ಲಿನ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸೃತ ಡಾ. ಸಿ. ಆರ್. ಚಂದ್ರಶೇಖರ್ ಅಭಿಮತ 

ಮಲೇಬೆನ್ನೂರು, ಮೇ 19 – ಸತ್ಯಾನ್ವೇಷಣೆಯೇ ಜ್ಞಾನ ವಿಜ್ಞಾನದ ಗುರಿ ಆಗಿದ್ದು, ಸುಳ್ಳು ಆಕರ್ಷಣೀಯವಾಗಿರುತ್ತದೆ. ಆದರೆ, ಸತ್ಯ ಕಹಿಯಾಗಿರುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯಾಧ್ಯಕ್ಷರು, ಮನೋವೈದ್ಯರು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸೃತರಾದ ಡಾ. ಸಿ.ಆರ್. ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಅವರು ಭಾನುವಾರ ಹನಗವಾಡಿ ಸಮೀಪದ ಪ್ರೊ. ಬಿ. ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಮಾನವ ಬಂಧುತ್ವ ವೇದಿಕೆಯ ನೆರವಿನಿಂದ ಸಂಘಟಿಸಿದ್ದ ಎರಡನೇ ದಿನದ ರಾಜ್ಯಮಟ್ಟದ ಕಾರ್ಯಕರ್ತರ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಒಂದು ಸಂಘಟನೆ ಬೆಳೆಯಲು ಅದರ ಪದಾಧಿಕಾರಿಗಳು ಮುಖ್ಯವಾಗುವುದಿಲ್ಲ, ಪ್ರತಿಯೊಬ್ಬ ಕಾರ್ಯಕರ್ತನೂ ಮುಖ್ಯವಾಗುತ್ತಾರೆ. ಅಂತಹ ಕಾರ್ಯಕರ್ತರನ್ನು ತಯಾರು ಮಾಡಲು ಹಮ್ಮಿಕೊಂಡಿದ್ದ ಈ ಶಿಬಿರ ಯಶಸ್ವಿಯಾಗಿದೆ.

ನಮಗೆ ಬರುವ ಅನೇಕ ರೋಗಗಳು ನಮ್ಮ ಜೀವನ ಶೈಲಿ ಮತ್ತು ನಾವು ಸೇವಿಸುವ ಆಹಾರದಿಂದ ಬರುತ್ತವೆ. ಆದ್ದರಿಂದ ಪಾರಂಪರಿಕ ಆಹಾರ ಸೇವನೆ, ಸಕ್ಕರೆ ಪದಾರ್ಥಗಳು ಹಾಗೂ ರೆಡಿಮೇಡ್ ಆಹಾರವನ್ನು ಕಡಿಮೆ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.               ಜಗತ್ತಿನ ಶೇ.20 ರಷ್ಟು ಜನರು ಖಿನ್ನತೆಯಿಂದ ಬಳಲುತ್ತಿದ್ದು, ಆರೋಗ್ಯಕರ ಜೀವನ ಶೈಲಿಯ ಮೂಲಕ ಹಾಗೂ ಅನಗತ್ಯವಾದ ಆಲೋಚನೆಗಳನ್ನು ಬಿಡುವ ಮೂಲಕ ಖಿನ್ನತೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಡಾ. ಚಂದ್ರಶೇಖರ್ ಸಲಹೆ ನೀಡಿದರು. 

ಮುಖ್ಯ ಅತಿಥಿಯಾಗಿದ್ದ ಕೆಜೆವಿಎಸ್ ರಾಜ್ಯ ಉಪಾಧ್ಯಕ್ಷ ಡಾ. ಆರ್.ಎನ್.ರಾಜಾನಾಯಕ್ ಮಾತನಾಡಿ, ಶಿಬಿರದಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೊಳಿಸಿದಾಗ ಮತ್ತೊಂದು ಶಿಬಿರವನ್ನು ಸಂಘಟಿಸಲು ಉತ್ಸಾಹ ಬರುತ್ತದೆ. ಆದ್ದರಿಂದ ಶಿಬಿರಾರ್ಥಿಗಳು ಶಿಬಿರದ ಆಶಯಗಳನ್ನು ಮುಂದೆ ಕೊಂಡೊಯ್ಯಬೇಕೆಂದು ಹೇಳಿದರು. 

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ನಮ್ಮ ಶತೃ ಯಾರೆಂದು ಗುರುತಿಸಿದರೆ, ನಮ್ಮ ಕಾರ್ಯಾಚರಣೆ ಸರಳವಾಗುತ್ತದೆ ಎಂದರು. 

ವೇದಿಕೆಯಲ್ಲಿ ಆವರಗೆರೆ ರುದ್ರಮುನಿ, ಕೆಜೆವಿಎಸ್ ರಾಜ್ಯ ಕಾರ್ಯದರ್ಶಿ ಇ. ಬಸವರಾಜು ಉಪಸ್ಥಿತರಿದ್ದರು. ಆಲ್ಬೂರು ಶಿವರಾಜು ಸ್ವಾಗತಿಸಿದರು. ರಾಜ್ಯ ಸಹ ಕಾರ್ಯದರ್ಶಿ ಹೆಚ್.ವಿ.ಮುರಳೀಧರ್ ವಂದಿಸಿದರು.

ಶಿಬಿರಾರ್ಥಿಗಳಾದ ರಾಯಚೂರು ಜಿಲ್ಲೆಯ ಮಂಜುನಾಥ್, ದಾವಣಗೆರೆ ಜಿಲ್ಲೆಯ ಶಿಕ್ಷಕ ಬಿ.ಅರುಣ್ ಕುಮಾರ್, ಶಿವಮೊಗ್ಗ ಜಿಲ್ಲೆಯ ಡಾ. ಎ.ಟಿ.ಪದ್ಮೇಗೌಡ ಮತ್ತು ಕೃಷ್ಣಾನಂದ ಮುಂತಾದವರು ಶಿಬಿರದ ಉಪಯುಕ್ತತೆಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. `ಗೆಲುವು ನಮ್ಮದು’ ಎಂಬ ಹಾಡಿನೊಂದಿಗೆ ಶಿಬಿರ ಮುಕ್ತಾಯಗೊಂಡಿತು.

error: Content is protected !!