ಸೈಕಲ್ ಬಳಸಿ ಆರೋಗ್ಯ, ಆನಂದ, ಪರಿಸರ ರಕ್ಷಿಸಿ

ಸೈಕಲ್ ಬಳಸಿ ಆರೋಗ್ಯ, ಆನಂದ, ಪರಿಸರ ರಕ್ಷಿಸಿ

ದಾವಣಗೆರೆ, ಮೇ 17 – ಸೈಕಲ್ ಸವಾರಿ ಮಾಡೋಣ, ಪೆಟ್ರೋಲ್, ಪರಿಸರ ಉಳಿಸೋಣ, ಸೈಕಲ್ ಸವಾರಿ ಆರೋಗ್ಯಕ್ಕೆ ರಹದಾರಿ. ಸಾಲ, ಕುಡಿತ, ತಂಬಾಕು ಸಾವಿಗೆ ರಹದಾರಿ, ಸದಾ ರೋಗಗಳು, ವಾಹನಗಳಿಂದ ದೂರವಿರಿ ಎಂಬ ಕರುಣಾ ಜೀವ ಕಲ್ಯಾಣ ಟ್ರಸ್ಟಿನ ಘೋಷ ವಾಕ್ಯಗಳನ್ನು ಒಳಗೊಂಡಿರುವ ಸೈಕಲ್‍ಗಳನ್ನು ಬಡವರಿಗಾಗಿ ನೀಡುತ್ತಿರುವುದು ಸಂತಸದ ವಿಷಯ. ಇಂತಹ ಸತ್ಕಾರ್ಯಕ್ಕೆ ದಾನ ನೀಡುವುದು ನಮ್ಮ ಕರ್ತವ್ಯ. ದಯವಿಟ್ಟು ಆರ್ಥಿಕವಾಗಿ ಸಬಲರಾದವರು ಇಂತಹ ಸತ್ಕಾರ್ಯಗಳಿಗೆ ದಾನವಿತ್ತು ಸಹಕರಿಸಬೇಕು ಎಂದು ಶ್ರೀಮತಿ ಎಸ್. ಮಲ್ಲಿಕಾ ಹೆಗಡೆ ಅವರು ಕರೆ ನೀಡಿದರು. 

ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಟ್ರಸ್ಟ್ ಕಚೇರಿಯಲ್ಲಿ ಈಚೆಗೆ ನಡೆದ 167ನೇ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ನಿವೃತ್ತ ಪ್ರಾಂಶುಪಾಲ ಶ್ರೀನಿವಾಸ್ ಕುಮಾರ್ ಮಾತನಾಡಿ, ಕರುಣಾ ಟ್ರಸ್ಟ್ ಸೇವಾ ಚಟುವಟಿಕೆಗಳಲ್ಲಿ ತೊಡಗಿರುವುದು ಶ್ಲ್ಯಾಘನೀಯ ಎಂದರು. ಸರ್ಕಾರಿ ಕಾರ್ಯಕ್ರಮಗಳು ಯಶಸ್ವಿಯಾಗದಿರಲು ಕಾರಣ ಎಲ್ಲವನ್ನು ಉಚಿತವಾಗಿ ಕೊಡುವುದು. ಆದರೆ ಟ್ರಸ್ಟಿನಿಂದ ಫಲಾನುಭವಿಗಳಿಗೆ ಉಚಿತವಾಗಿ ಕೊಡದೇ ಅವರಿಂದ ಶೇ. 10 ರಷ್ಟಾದರೂ ತೆಗೆದುಕೊಂಡರೆ ಅದಕ್ಕೆ ನಿಜವಾದ ಮೌಲ್ಯವಿರುತ್ತದೆ. ಅಂತಹ ಸತ್ಕಾರ್ಯ ಟ್ರಸ್ಟಿನಿಂದ ನಡೆಯುತ್ತಿದೆ. ಅರ್ಹರಿಗೆ ಸೈಕಲ್ ನೀಡಿದ್ದಾರೆ. ನಾವು ಕೊಟ್ಟ ಹಣ ದುರ್ವಿನಿಯೋಗವಾಗದೆ, ಸದುಪಯೋಗವಾಗಿದೆ ಎಂದು ಸ್ಥಳದಲ್ಲಿಯೇ ದಾನವಿತ್ತು ಸಂತಸ ವ್ಯಕ್ತಪಡಿಸಿದರು.

ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ದಾವಣಗೆರೆಯ ಎಲ್ಲರಲ್ಲಿ ಉತ್ತಮ ಆರೋಗ್ಯ, ಆನಂದದ ಅರಿವು ಮೂಡಬೇಕು. ಅರಿವು ಆಧಾರಿತ ಸಾಮೂಹಿಕ ಕಾರ್ಯಗಳಾಗಬೇಕು. ನಾವೇ ಸಮಸ್ಯೆಗಳನ್ನು ಸೃಷ್ಟಿಸುವವರು ಅದಕ್ಕೆ ಪರಿಹಾರವೂ ನಮ್ಮಿಂದಲೇ. ಉತ್ತಮ ಆರೋಗ್ಯ ಪಡೆಯಲು, ಪರಿಸರ ಉಳಿಸಲು ಸೈಕಲ್ ಬಳಸಬೇಕು ಎಂದರು. 

ಪ್ರೊ. ಎಂ. ಬಸವರಾಜ್ ಮಾತನಾಡಿ, ಬೆಣ್ಣೆ ನಗರಿಯಾಗಿರುವ ದಾವಣಗೆರೆ, ಸೈಕಲ್ ನಗರಿಯಾಗಬೇಕು ಎಂಬ ಆಶಯವನ್ನು ತಿಳಿಸಿದರು. 

ಟ್ರಸ್ಟಿನ ಉಪಾಧ್ಯಕ್ಷ ಬಸವರಾಜ ವಡೆಯರ್‍ ಅವರು ದಾನಿಗಳಿಗೆ ಮತ್ತು ಫಲಾನುಭವಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಡಾ. ಎಸ್. ಮೃತ್ಯುಂಜಯ ಅವರು ಕರುಣಾ ಟ್ರಸ್ಟಿನ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಫಲಾನುಭವಿ ಪವನ್ ಮಾತನಾಡಿ, ತಂದೆ-ತಾಯಿಯನ್ನು ಕಳೆದುಕೊಂಡ ನನಗೆ ಸೈಕಲ್ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮಧುಸೂದನ್ ವಂದಿಸಿದರು. 

error: Content is protected !!