ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಿ, ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದೇವೆ ಮತ್ತು ಶೀಘ್ರವೇ ಪರ್ಯಾಯ ವ್ಯವಸ್ಥೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
– ಎಇಇ ಶಿವಮೂರ್ತಿ
ಮಲೇಬೆನ್ನೂರು, ಮೇ 17- ಕಡರನಾಯ್ಕನ ಹಳ್ಳಿಯಿಂದ ಕೊಕ್ಕ ನೂರು, ಜಿ.ಟಿ ಕಟ್ಟೆ ಮಾರ್ಗವಾಗಿ ಮೂಗಿನಗೊಂದಿಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ಅಪೂರ್ಣ ವಾಗಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರಾಯಚೂರು ಮೂಲದ ಗುತ್ತಿಗೆದಾರ ವಿರುಪಾಕ್ಷಪ್ಪ ಬಳೆ ಅವರು ಈ ಕಾಮಗಾರಿಯನ್ನು 4.75 ಕೋಟಿ ರೂ.ಗಳಿಗೆ ಟೆಂಡರ್ ಪಡೆದು, ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸದೇ ಅರ್ಧಕ್ಕೇ ನಿಲ್ಲಿಸಿದ್ದಾರೆ.
ಕಾಮಗಾರಿ ಪ್ರಾರಂಭವಾಗಿ 2 ವರ್ಷಗಳೇ ಕಳೆದರೂ, ರಸ್ತೆ ಪೂರ್ಣಗೊಂಡಿಲ್ಲ. ಗುತ್ತಿಗೆದಾರನು ಇಚ್ಛೆ ಬಂದಾಗ ಬಂದು ಅಲ್ಪ ಸ್ವಲ್ಪ ಕಾಮಗಾರಿ ಮಾಡಿ ನಾಪತ್ತೆ ಆಗುತ್ತಾನೆ ಎಂದು ಕೊಕ್ಕನೂರು ಮತ್ತು ಕೆ.ಎನ್ ಹಳ್ಳಿ ಗ್ರಾಮಸ್ಥರು ದೂರಿದರು. ರಸ್ತೆಗೆ ಹಾಕಿದ ಜಲ್ಲಿ ಕಲ್ಲುಗಳು ಎದ್ದ ಪರಿಣಾಮ ಭತ್ತದ ಹುಲ್ಲಿನ ಲೋಡ್ ತರಲು ಕಷ್ಟವಾಗುತ್ತಿದ್ದು, ವಾಹನ ಸವಾರರು ಇಲ್ಲಿ ಸಂಚರಿಸಲು ನಿತ್ಯವೂ ಪರದಾಡುವಂ ತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿದ್ದಾರೆ.
ರಸ್ತೆಯ ಒಂದೆಡೆ ಜಲ್ಲಿ ಕಲ್ಲು ಹರಡಿದರೆ ಮತ್ತೊಂದೆಡೆ ಜಲ್ಲಿ ಕಲ್ಲಿನ ಗುಡ್ಡೆ ಹಾಕಿದ್ದಾರೆ ಮತ್ತು ಕೆಲವೆಡೆ ಕಳಪೆ ಮಣ್ಣು ಹಾಕಿರುವ ಪರಿಣಾಮ ದ್ವಿಚಕ್ರ ವಾಹನ ಸವಾರರು ಆಯಾ ತಪ್ಪಿ ಬಿದ್ದು ಗಾಯ ಮಾಡಿಕೊಂಡ ಘಟನೆ ಸಂಭವಿಸುತ್ತಿವೆ.
ಕೂಡಲೇ ಕಾಮಗಾರಿ ಪೂರ್ಣಗೊಳಿಸದೇ ಇದ್ದಲ್ಲಿ, ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಿ ಧರಣಿ ಮಾಡುವುದಾಗಿ ಕೊಕ್ಕನೂರಿನ ದಾಸರ ಸೋಮಶೇಖರ್ ಮತ್ತು ಜಿ.ಟಿ ಕಟ್ಟೆ ರಮೇಶ್ ಎಚ್ಚರಿಕೆ ನೀಡಿದ್ದಾರೆ.