ಹೊನ್ನಾಳಿ : ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಪುಣ್ಯಕೋಟಿ ನಿರ್ದೇಶನ
ಹೊನ್ನಾಳಿ, ಮೇ 16- ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪ ಕವಾಗಿ ವಿತರಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪುಣ್ಯಕೋಟಿ ಸೂಚಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ನಡೆದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರಸಭೆಯ ಪೌರ ಕಾರ್ಮಿಕರು ಖಾಯಂ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಇವರ ಕೆಲಸಕ್ಕೆ ಸರಿಯಾದ ವೇತನ ಪಡೆಯುವ ಹಕ್ಕಿದೆ. ಆದ್ದರಿಂದ ಯಾವುದೇ ತಾರತಮ್ಯವಾಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಸಿದರು.
ಪುರಸಭೆಯ ಆಡಳಿತಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳ ಅರಿವಿಲ್ಲದೇ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಪೌರಕಾರ್ಮಿಕರು ಈ ಬಗ್ಗೆ ತಮ್ಮ ಮೇಲಾಧಿಕಾರಿಗಳಿಂದ ಮತ್ತು ತಮ್ಮ ಸಂಘಟನೆ ಮೂಲಕ ಮಾಹಿತಿ ಪಡೆದು ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳು ವಂತೆ ಕರೆ ನೀಡಿದರು.
ಪೌರ ಕಾರ್ಮಿಕರಿಗೆ ಪುರಸಭೆಯಿಂದ ಸಿಗಬೇಕಾದ ಸೌಲಭ್ಯ ಮತ್ತು ಪರಿಕರಗಳ ಬಗ್ಗೆ ವಿವರಿಸಿ, ನಿಯಮಿತವಾಗಿ ಕುಟುಂಬ ಸಮೇತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಎಚ್. ನಿರಂಜನಿ ಮಾತನಾಡಿ, ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯ ಮಾಡುವುದರಿಂದ ಸಮಾಜದ ಎಲ್ಲಾ ವರ್ಗದವರು ಆರೋಗ್ಯದಿಂದಿರಲು ಸಹಕಾರಿಯಾಗಿದೆ ಎಂದು ಪೌರ ಕಾರ್ಮಿಕರ ಕಾರ್ಯವನ್ನು ಶ್ಲ್ಯಾಘಿಸಿದರು.
ಪೌರ ಕಾರ್ಮಿಕರು ಆರೋಗ್ಯ ಸಂಬಂಧಿತ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ, ಇನ್ನು ಮುಂದೆ ಯಾರೂ ನಿರ್ಲಕ್ಷ್ಯ ಮಾಡದೇ ಇನ್ಶೂರೆನ್ಸ್ ಮಾಡಿಸಿಕೊಂಡರೆ ಅನಾರೋ ಗ್ಯದ ಕಾಲದಲ್ಲಿ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದರು.
ಪೌರ ಕಾರ್ಮಿಕ ಕುಟುಂಬಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿದ್ದರೆ ಅವರು ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಪಡೆದು ಕಾರ್ಮಿಕ ಇಲಾಖೆಯ ಸೌಲಭ್ಯ ಪಡೆದು ಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಮಿಕ ನಿರೀಕ್ಷಕರಾದ ಮುಮ್ತಾಜ್ ಬೇಗಂ ಕಾರ್ಮಿಕ ಇಲಾಖೆಯ ಸೌಲಭ್ಯಗಳ ಬಗ್ಗೆ ಮತ್ತು ಕಾಯ್ದೆಗಳ ಬಗ್ಗೆ ವಿವರಿಸಿದರು. ಪೌರ ಕಾರ್ಮಿಕರಿಗೆ ಸಂರಕ್ಷಣಾ ಉಪಕರಣ ವಿತರಿಸಲಾಯಿತು.
ಈ ವೇಳೆ ತಹಶೀಲ್ದಾರ್ ಪುರಂದರ ಹೆಗ್ಡೆ, ಸಹಾಯಕ ಸರ್ಕಾರಿ ಅಭಿಯೋಜಕ ಭೀಮಯ್ಯ, ವಕೀಲರ ಸಂಘದ ಅಧ್ಯಕ್ಷ ಕೆ.ಪಿ. ಜಯಪ್ಪ, ಉಪಾಧ್ಯಕ್ಷ ಚಂದ್ರಪ್ಪ ಮಡಿವಾಳ್, ಕಾರ್ಯದರ್ಶಿ ಬಿ.ಎಂ. ಪುರುಷೋತ್ತಮ್, ಪುರಸಭಾ ಎಂಜಿನಿಯರ್ ದೇವರಾಜ್, ಆರೋಗ್ಯ ನಿರೀಕ್ಷಕರಾದ ಪರಮೇಶ್ವರ್ ನಾಯ್ಕ್, ಹರ್ಷವರ್ಧನ್, ಸಿಬ್ಬಂದಿ ಮೋಹನ್, ರೋಹಿತ್, ರಂಜಿತಾ, ಮಾಲತೇಶ್, ಶಿವಣ್ಣ, ಭಾಗ್ಯಮ್ಮ ಮತ್ತಿತರರಿದ್ದರು.