ಹೊನ್ನಾಳಿ : ಸಾರ್ವಜನಿಕರ ಸಭೆಯಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ
ಹೊನ್ನಾಳಿ, ಮೇ 16 – ಸರ್ಕಾರಿ ಅಧಿಕಾರಿಗಳು ವಿಳಂಬ ಧೋರಣೆ ತೋರದೇ ಸಕಾಲದಲ್ಲಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು ಎಂದು ದಾವಣಗೆರೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರವು ನಿಗದಿ ಪಡಿಸಿದ ಶುಲ್ಕವನ್ನು ಮಾತ್ರವೇ ಪಡೆಯಬೇಕು ಎಂದು ಕಾನೂನು ಇದ್ದರೂ ಅಧಿಕಾರಿಗಳು ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿನ ಹಣ ಕೇಳುತ್ತಾರೆ. ಒಂದು ವೇಳೆ ಹಣ ನೀಡದಿದ್ದರೆ ವಿನಾ ಕಾರಣ ಕೆಲಸ ಮಾಡಿಕೊಡದೇ ಸತಾಯಿಸುತ್ತಾರೆ ಎಂಬ ದೂರುಗಳು ನಮ್ಮ ಇಲಾಖೆಗೆ ಬರುತ್ತಲೇ ಇರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರವು ಸಾರ್ವಜನಿಕರ ತೆರಿಗೆ ಹಣದಿಂದ ನಮಗೆ ಸಂಬಳ ಮತ್ತಿತರೆ ಸೌಲಭ್ಯಗಳನ್ನು ನೀಡುತ್ತಾದದರೂ ಅಧಿಕಾರಿಗಳು ಸಾರ್ವಜನಿಕರಿಗೆ ಪದೇ – ಪದೇ ತೊಂದರೆ ಕೊಡುತ್ತಿರುವುದು ಸರಿಯಲ್ಲವೆಂದು ಕಿವಿ ಮಾತು ಹೇಳಿದರು.
ಹೊನ್ನಾಳಿ ತಾಲ್ಲೂಕಿನ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ವಿಳಂಬ ನೀತಿ ತೋರಿದರೆ, ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ತಾರತಮ್ಯ ನೀತಿ ಅನುಸರಿಸಿದರೆ, ಕಳಪೆ ಕಾಮಗಾರಿ ಮತ್ತು ಹಣ ದುರುಪಯೋಗ ಕುರಿತ ದೂರುಗಳನ್ನು ಸಾರ್ವಜನಿಕರು ಪ್ರಪತ್ರ-1 ಮತ್ತು 2 ರಲ್ಲಿ ಅಫಿಡೆವಿಟ್‍ನೊಂದಿಗೆ ನಿರ್ಭೀತಿಯಿಂದ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ದೂರುಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿದ್ದರೆ ಅಂತಹ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಅಕ್ರಮ ಮರಳುಗಾರಿಕೆಗೆ ಸಂಬಂಧಪಟ್ಟಂತೆ 1 ಮತ್ತು ಕಂದಾಯ ಇಲಾಖೆಗೆ ಸಂಬಂಧಪಟ್ಟ 2 ದೂರುಗಳು ದಾಖಲಾಗಿದ್ದು, ಅಧಿಕಾರಿಗಳಿಗೆ 15 ದಿನಗಳೊಳಗೆ ಈ ದೂರುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬರಗಾಲವಿರುವ ಪ್ರಯುಕ್ತ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ವಿಶೇಷ ಗಮನಹರಿಸಬೇಕು ಮತ್ತು ಅರಣ್ಯ ಇಲಾಖೆಯವರು ಪ್ರಾಣಿಗಳಿಗೆ ಸಮರ್ಪಕ ನೀರಿನ ವ್ಯವಸ್ಥೆಯನ್ನು ಮಾಡಿ, ಗ್ರಾಮಗಳಿಗೆ ಪ್ರಾಣಿಗಳು ನುಗ್ಗದಂತೆ ಕ್ರಮ ಜರುಗಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಡಿ.ವೈ.ಎಸ್.ಪಿ. ಕಲಾವತಿ, ಪೊಲೀಸ್ ಇನ್‌ಸ್ಪೆಕ್ಟರ್‍ಗಳಾದ ಮಧುಸೂದನ್, ಪ್ರಭು ಡಿ. ಸೂರಿನ, ಹೆಚ್.ಎಸ್.ರಾಷ್ಟ್ರಪತಿ, ಸಿಬ್ಬಂದಿಗಳಾದ ಗಿರೀಶ್, ಲಿಂಗೇಶ್, ಬಸವರಾಜ್, ಉಪವಿಭಾಗಾಧಿಕಾರಿ ವಿ.ಅಭಿಷೇಕ್, ತಹಶೀ ಲ್ದಾರ್‍ಗಳಾದ ಪುರಂದರ ಹೆಗ್ಡೆ, ಫಿರೋಜ್ ಷಾ ಸೋಮನಕಟ್ಟಿ, ಪುರಸಭಾ ಮುಖ್ಯಾಧಿಕಾರಿ ಹೆಚ್.ನಿರಂಜನಿ, ತಾಲ್ಲೂಕು ಪಂಚಾಯ್ತಿ ಸದಸ್ಯರುಗಳಾದ ಹೆಚ್.ವಿ.ರಾಘವೇಂದ್ರ, ಡಿ.ಎಸ್.ಸುಮಾ ಸೇರಿದಂತೆ ಅವಳಿ ತಾಲ್ಲೂಕುಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.