ದೂಡಾ ಎಇಇ ಶ್ರೀಕರ್ ನಿವೃತ್ತಿ, ಬಿಳ್ಕೊಡುಗೆ

ದೂಡಾ ಎಇಇ ಶ್ರೀಕರ್ ನಿವೃತ್ತಿ, ಬಿಳ್ಕೊಡುಗೆ

ದಾವಣಗೆರೆ, ಮೇ 15- ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಹೆಚ್. ಶ್ರೀಕರ್ ಅವರು ತಮ್ಮ ಸೇವೆಯಿಂದ ಕಳೆದ ವಾರ ನಿವೃತ್ತರಾದರು.

ನಗರ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿ. ಹೆಚ್.ಡಿ. ಹನುಮಂತಪ್ಪ ಮತ್ತು ನಗರಸಭೆ ಮಾಜಿ ಸದಸ್ಯರಾಗಿದ್ದ ಶ್ರೀಮತಿ ಬಸಮ್ಮ ದಂಪತಿ ಪುತ್ರರಾಗಿರುವ ಶ್ರೀಕರ್, ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ದೂಡಾ ಎಇಇ ಆಗಿ ಸುದೀರ್ಘ 41 ವರ್ಷಗಳ ಕಾರ್ಯ ನಿರ್ವಹಿಸಿದ್ದಾರೆ.

ಬೀಳ್ಕೊಡುಗೆ : ಸೇವೆಯಿಂದ ನಿವೃತ್ತರಾದ ಶ್ರೀಕರ್ ಅವರನ್ನು ದೂಡಾ ವತಿಯಿಂದ ದೂಡಾ ಕಛೇರಿಯ ಸಭಾಂಗಣದಲ್ಲಿ ಇಂದು ಸಂಜೆ ಏರ್ಪಾಡಾಗಿದ್ದ ಸಮಾರಂಭದಲ್ಲಿ ಬೀಳ್ಕೊಡಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೂಡಾ ಆಯುಕ್ತ ಮಹೇಶ್ ಬಾಬು ಅವರು ಶ್ರೀಕರ್ ಅವರನ್ನು ಶಾಲು ಹೊದಿಸಿ, ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್ ಬಾಬು, ನಗರದ ಪ್ರತಿಷ್ಠಿತ ಬಡಾವಣೆಗಳಾದ ಶ್ರೀ ಎಸ್. ನಿಜಲಿಂಗಪ್ಪ ಬಡಾವಣೆ, ಸರ್ ಮಿರ್ಜಾ ಇಸ್ಮಾಯಿಲ್ ನಗರ ಬಡಾವಣೆ, ಶ್ರೀ ಮಹಮ್ಮದಾಲಿ ಜೋಹರ್ ನಗರ ಬಡಾವಣೆ ಮತ್ತು ಜೆ.ಹೆಚ್. ಪಟೇಲ್ ಬಡಾವಣೆಗಳ ನಿರ್ಮಾಣ ಕಾರ್ಯದಲ್ಲಿ ಶ್ರೀಕರ್ ವಹಿಸಿದ್ದ ಮಹತ್ತರ ಪಾತ್ರ ಸ್ಮರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ವಿವಿಧ ಬಡಾವಣೆಗಳಲ್ಲಿ ಅಲಂಕಾರಿಕ ದೀಪಗಳು ಹಾಗೂ ಜೆ.ಹೆಚ್. ಪಟೇಲ್ ಬಡಾವಣೆಯ ರಸ್ತೆಗಳ ಬದಿಯಲ್ಲಿ ಗಿಡಗಳನ್ನು ನೆಟ್ಟು, ಅವುಗಳನ್ನು ಸುಂದರವಾಗಿ ಬೆಳೆಸುವುದರಲ್ಲಿ ಶ್ರೀಕರ್ ಸಲ್ಲಿಸಿದ್ದ ಸೇವೆ ಶ್ಲ್ಯಾಘನೀಯ ಎಂದರು.

ಅಲ್ಲದೇ, ತಮ್ಮ ಸೇವಾವಧಿಯಲ್ಲಿ ಶ್ರೀ ಡಿ. ದೇವರಾಜ ಅರಸು ಬಡಾವಣೆ ಎ ಬ್ಲಾಕ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಮತ್ತು ನಗರದ ನಾಗರಿಕರಿಗೆ ಕುಡಿಯುವ ನೀರೊದಗಿಸುವ ಟಿವಿ ಸ್ಟೇಷನ್ ಕೆರೆ ಅಭಿವೃದ್ಧಿಯಲ್ಲೂ ಶ್ರೀಕರ್ ಶ್ರಮಿಸಿದ್ದಾರೆ ಎಂದು ಮಹೇಶ್ ಬಾಬು ಹೇಳಿದರು.

ದೂಡಾ ಸಹಾಯಕ ಕಾರ್ಯಪಾಲಕ ಅಭಿಯಂತರ ಸುಜಯ್ ಕುಮಾರ್, ಕಿರಿಯ ಅಭಿಯಂತರರಾದ ಅಕ್ಷತಾ, ಸರ್ವೇಯರ್ ಲೋಕೇಶ್ ಕುಮಾರ್, ವ್ಯವಸ್ಥಾಪಕ ಪ್ರಭು, ಪ್ರಥಮ ದರ್ಜೆ ಸಹಾಯಕರಾದ ಸುನೀತಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!