ಬಸವಣ್ಣ ಕಂಡ ಕನಸು ನನಸಾಗಿಸಲು ಬೀರದೇವರ ಸಹೋದರತ್ವ ಭಾವನೆ ಮಾದರಿ

ಬಸವಣ್ಣ ಕಂಡ ಕನಸು ನನಸಾಗಿಸಲು ಬೀರದೇವರ ಸಹೋದರತ್ವ ಭಾವನೆ ಮಾದರಿ

ಕುಣೆಬೆಳಕೆರೆ : ಸಮುದಾಯ ಭವನ ಲೋಕಾರ್ಪಣೆ ಸಮಾರಂಭದಲ್ಲಿ ಈಶ್ವರಾನಂದಪುರಿ ಸ್ವಾಮೀಜಿ

ಮಲೇಬೆನ್ನೂರು, ಮೇ 15- ಬಸವಣ್ಣ ಕಂಡ ಕನಸು ನನಸಾಗಿಸಲು ಬೀರದೇವರ ಸಹೋದರತ್ವ ಭಾವನೆ ಮಾದರಿಯಾಗಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.

ಅವರು, ಕುಣೆಬೆಳಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕುಣೆಬೆಳಕೆರೆ ಬೀರಪ್ಪ ಮತ್ತು ಮುಗಳಗೇರಿ ಬೀರಪ್ಪ ಅಣ್ಣ-ತಮ್ಮಂದಿರಾಗಿ ಅನ್ಯೋನ್ಯತೆಯಿಂದ ನಡೆದುಕೊಂಡು ಬಂದಿದ್ದಾರೆ. ಅವರಿಬ್ಬರೂ ಒಬ್ಬರನ್ನು ಬಿಟ್ಟು ಒಬ್ಬರೇ ಯಾವ ಕಾರ್ಯವನ್ನೂ ಮಾಡುವುದಿಲ್ಲ. ಇವರ ಈ ಸಹೋದರತ್ವ ಮತ್ತು ಒಗ್ಗಟ್ಟನ್ನು ನಾವು ನಮ್ಮ ಕುಟುಂಬಗಳಲ್ಲಿ ಅನುಸರಿಸಿದರೆ ಮತ್ಸರ, ಕಲಹಗಳಿಂದ ದೂರವಿರುವುದರ ಜೊತೆಗೆ ಸುಖೀ ಜೀವನ ಸಾಗಿಸಬಹುದೆಂದು ಶ್ರೀಗಳು ಭಕ್ತರಿಗೆ ತಿಳಿಸಿದರು.

ದೇವರುಗಳಲ್ಲಿರುವ ಒಗ್ಗಟ್ಟು ನಮ್ಮಲ್ಲಿ ಏಕೆ ಇಲ್ಲ? ಎಂದು ಪ್ರಶ್ನಿಸಿದ ಶ್ರೀಗಳು, ಬೀರದೇವರುಗಳ ಮೂಲಕ ಹಾಲುಮತ ಸಂಸ್ಕೃತಿ ಕೂಡಿ ಬಾಳುವುದನ್ನು ತೋರಿಸಿಕೊಟ್ಟಿದೆ. ಕೂಡಿ ಬಾಳುವುದರಲ್ಲಿರುವ ಸುಖ-ಸಂತೋಷ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ಒಡೆದು ಹೋದ ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿ ದೇವರಲ್ಲಿದ್ದು, ಕೂಡಿ ಬಾಳುವುದೇ ನಿಜವಾದ ಧರ್ಮವಾಗಿದೆ. ಇದನ್ನೇ ಕನಕದಾಸರು, ಬಸವಣ್ಣನವರು ತಮ್ಮ ವಚನಗಳಲ್ಲಿ ಹೇಳಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮದ ಎಂ.ಸಿ. ಚಂದ್ರಶೇಖರ್ ಅವರು ಪೂಜಾರ್ ಕೆಂಗಸಿದ್ದಪ್ಪ ಮತ್ತು ಅಜ್ಜಪ್ಪ ಹಾಗೂ ಗ್ರಾಮಸ್ಥರ, ಭಕ್ತರ ಶ್ರಮದ ಪ್ರತಿಫಲವಾಗಿ ಈ ಬೃಹತ್ ಸಮುದಾಯ ಭವನ ನಿರ್ಮಾಣವಾಗಿದೆ. ಇದಕ್ಕೆ ಸರ್ಕಾರದ ಅನುದಾನವೂ ಸಿಕ್ಕಿದ್ದು, ಮಲೇಬೆನ್ನೂರಿನ ಕೆ.ಪಿ. ಸಿದ್ದಬಸಪ್ಪನವರ ಸಹಕಾರವೂ ಇದೆ. 2008ರಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಎಕರೆ ಜಾಗ ನಿಗದಿ ಮಾಡಲಾಗಿತ್ತು. ಎಂದು ಚಂದ್ರಶೇಖರ್ ಸ್ಮರಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿ.ಪಂ. ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಮಾಜಿ ಸದಸ್ಯರಾದ ಎಂ. ನಾಗೇಂದ್ರಪ್ಪ, ಕೆಂಗಲಹಳ್ಳಿ ಗುರುಮೂರ್ತಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಗ್ರಾ.ಪಂ. ಅಧ್ಯಕ್ಷ ಎಂ. ನಾಗರಾಜಪ್ಪ, ಉಪಾಧ್ಯಕ್ಷೆ ಪದ್ಮಾವತಿ ಸಾಯಿಪ್ರಸಾದ್,  ನಿವೃತ್ತ ಪೊಲೀಸ್ ಅಧಿಕಾರಿ ಟಿ.ಎಸ್. ಮುರುಗಣ್ಣನವರ್, ಸಿ.ಎನ್. ಹುಲಿಗೇಶ್, ಕೆ.ಪಿ. ಗಂಗಾಧರ್, ಪಿ.ಹೆಚ್. ಶಿವಕುಮಾರ್, ಭೋವಿ ಕುಮಾರ್, ಗ್ರಾಮದ ಮುಖಂಡರಾದ ಆನೆಕೊಂಡದ ಬಸವರಾಜಪ್ಪ, ಬಾವಿಕಟ್ಟಿ ಮರುಳಪ್ಪ,  ಜಿ.ಸಿ. ರುದ್ರಪ್ಪ, ಭೋವಿ ಅಂಜಿನಪ್ಪ, ಸುಂಕದರ ಕರಿಬಸಪ್ಪ, ಸುಂಕದರ ಹನುಮಂತಪ್ಪ, ಪೂಜಾರ ಹನುಮಂತಪ್ಪ, ಪೂಜಾರ್ ಚಿಕ್ಕಪ್ಪ,  ಮುಗಳಗೇರಿಯ ಬಸಯ್ಯ, ಯೋಗಯ್ಯ, ಮಲ್ಲಿಕಾರ್ಜುನಯ್ಯ ಸ್ವಾಮಿಗಳು ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. 

ಯಾದಗಿರಿ ಜಿಲ್ಲಾ ಪೊಲೀಸ್ ಕಛೇರಿಯ ಸಿಪಿಐ ದೇವೇಂದ್ರಪ್ಪ ಸ್ವಾಗತಿಸಿದರು.

error: Content is protected !!