ರಾಣೇಬೆನ್ನೂರು ಮೇ 15- ತಾಂತ್ರಿಕ ಸಮಸ್ಯೆ ಬದಿಗಿಟ್ಟು, ರೈತರ ಖಾತೆಗೆ ಬರ ಪರಿಹಾರದ ಹಣ ಜಮಾ ಆಗುವಂತೆ ಕ್ರಮವಹಿಸಿ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಅವರು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಆಧಾರ್ ಜೋಡಣೆ ಮಿಸ್ ಮ್ಯಾಚ್ ಸಮಸ್ಯೆಯಿಂದಾಗಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಣ ಜಮಾ ಆಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ರೈತರು ಹೊಸ ತಾಂತ್ರಿಕ ವ್ಯವಸ್ಥೆಗೆ ಹೊಂದಿಕೊಂಡಿಲ್ಲ. ಆದ್ದರಿಂದ ಯಾವುದೇ ದೋಷಗಳಿದ್ದರೂ ಅಧಿಕಾರಿಗಳೇ ಮುಂದೆ ನಿಂತು ಸಮಸ್ಯೆ ಸರಿಪಡಿಸಬೇಕೆಂದು ಒತ್ತಾಯಿಸಿದರು.
ಒಂದು ವಾರದ ಗಡುವು ನೀಡಿದ ಅವರು, ಸಮಸ್ಯೆ ಬಗೆ ಹರಿಯದಿದ್ದರೆ ತಹಶೀಲ್ದಾರ್ ಕಚೇರಿ ಮತ್ತು ಕೃಷಿ ಇಲಾಖೆಗೆ ಬೀಗ ಜಡಿದು ಪ್ರತಿಭಟನೆ ಮೂಲಕ ಹೆದ್ದಾರಿ ತಡೆಯುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ತಹಶೀಲ್ದಾರ್ ಟಿ. ಸುರೇಶ್, ರೈತರಿಗೆ ಮೋಸ ಮಾಡದೇ ನ್ಯಾಯ ಒದಗಿಸುತ್ತೇವೆ ಎಂದು ಭರವಸೆ ನೀಡಿ ರೈತರನ್ನು ಸಮಾಧಾನ ಪಡಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ಸಹಾಯಕ ಕೃಷಿ ನಿರ್ದೇಶಕ ಶಾಂತಮಣಿ, ಕೃಷಿ ಅಧಿಕಾರಿ ಎಂ. ಬಸವರಾಜ, ಅರವಿಂದ, ರೈತ ಮುಖಂಡರಾದ ಚಂದ್ರಣ್ಣ ಬೇಡರ, ಚಂದ್ರಣ್ಣ ಬಣಕಾರ, ಎಸ್. ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ, ಕವಿತಾ ಕುಸಗೂರ, ಪುಷ್ಪಾ ಅಂಗಡಿ, ಇಂದ್ರಮ್ಮ ಸಣ್ಮನಿ, ಇಂದಿರಾ ಕಮ್ಮಾರ, ಯಲ್ಲಪ್ಪ ಗಂಧಣ್ಣನವರ ಇತರರು ಇದ್ದರು.