ಮಹಾನಗರ ಪಾಲಿಕೆಯಲ್ಲಿ ವಯೋ ನಿವೃತ್ತಿ ಸಿಬ್ಬಂದಿಗಳಿಗೆ ಆತ್ಮೀಯ ಬೀಳ್ಕೊಡುಗೆ

ಮಹಾನಗರ ಪಾಲಿಕೆಯಲ್ಲಿ ವಯೋ ನಿವೃತ್ತಿ  ಸಿಬ್ಬಂದಿಗಳಿಗೆ ಆತ್ಮೀಯ ಬೀಳ್ಕೊಡುಗೆ

ದಾವಣಗೆರೆ, ಮೇ 14 – ಮಹಾನಗರ ಪಾಲಿಕೆಯ ನೌಕರರಾದ ಕೆ. ಗಂಗಪ್ಪ ಮತ್ತು ಓಂಕಾರ್ ಮೂರ್ತಿ ಅವರು ಸೇವೆಯಿಂದ ವಯೋ ನಿವೃತ್ತಿಯಾಗಿದ್ದು, ಮಹಾನಗರ ಪಾಲಿಕೆಯ ನೌಕರರ ಸಂಘ ಮತ್ತು ಪಾಲಿಕೆ ಸಿಬ್ಬಂದಿಗಳು ಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರನ್ನು ಬಿಳ್ಕೋಡಲಾಯಿತು.

ನಿವೃತ್ತ ನೌಕರರನ್ನುದ್ದೇಶಿಸಿ ಮಾತನಾಡಿದ ಸಿಬ್ಬಂದಿಗಳು, ಎಸ್‌ಎಫ್‌ಸಿ ವೇತನ ಆಯೋಗ ರಚಿಸಲು ರಾಜ್ಯ ವ್ಯಾಪಿ ಮುಷ್ಕರ ನಡೆದ ಸಂದರ್ಭದಲ್ಲಿ ಬಲಗೈಗೆ ಬೆಂಕಿ ತಗಲಿ ಆಸ್ಪತ್ರೆಗೆ ದಾಖಲಾಗಿದ್ದರೂ ಆರೋಗ್ಯ ಲೆಕ್ಕಿಸದೇ ಹೋರಾಟಕ್ಕೆ ದುಮುಕಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂತಹ ನಿಷ್ಠಾವಂತ ನೌಕರರ ಮುಷ್ಕರದ ಫಲವಾಗಿ ಕೆಲವು ತಿಂಗಳ ನಂತರ  ಸರ್ಕಾರ ಎಸ್‌ಎಫ್‌ಸಿ ರಾಜ್ಯ ಹಣಕಾಸು ಆಯೋಗ ರಚನೆಯಾಯಿತು ಎಂದು ಸ್ಮರಿಸಿದರು.

ಅಂದು ಹೋರಾಟ ಮಾಡಿದ ಪ್ರಾಮಾಣಿಕ ನೌಕರರ ಹೋರಾಟದ ಪ್ರತಿಫಲದಿಂದ ನಾವೆಲ್ಲರೂ ಪ್ರತಿ ತಿಂಗಳು ನಿಶ್ಚಿಂತೆಯಿಂದ ವೇತನ ಪಡೆಯುತ್ತಿದ್ದೇವೆ. ಇಂತಹ ಮುಷ್ಕರಗಳು ಈಗಿನ ಯುವಕರಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡಗಳು ಹೆಚ್ಚಾಗುತ್ತಿರುವುದರಿಂದ ನೌಕರರು ತಮ್ಮ ವಯೋ ಸಹಜ ನಿವೃತ್ತಿಯನ್ನು ಪೂರೈಸುವುದೇ ಒಂದು ದೊಡ್ಡ ಸಾಧನೆ. ಇವರನ್ನು ನೋಡಿದರೆ 60 ವರ್ಷ ಪೂರೈಸಿದ್ದಾರೆ ಎಂಬುದೇ ಆಶ್ಚರ್ಯ ಎಂದು ಶ್ಲ್ಯಾಘಿಸಿದರು. 

ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್, ಸಂಘಟನಾ ಕಾರ್ಯದರ್ಶಿ ಎಸ್‌.ಕೆ. ಪಾಂಡುರಾಜ್, ಎಂ. ಗೋವಿಂದ ನಾಯಕ್, ನಾಗರಾಜ್, ನವೀನ್, ಟಿ.ಸಿ. ಬಸವರಾಜಯ್ಯ, ಗುರುಮೂರ್ತಿ, ಟಿ.ಸಿ. ಅಸ್ಲಂ, ರಘು, ಅರುಣ್ ಕುಮಾರ್, ಜಯಣ್ಣ, ಸಂಘದ  ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!