ದಾವಣಗೆರೆ, ಮೇ 12 – ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಟಾಪರ್ ಆಗಿರುವ ಶ್ರೀ ಸಿದ್ಧಗಂಗಾ ಪ್ರೌಢಶಾಲಾ ವಿದ್ಯಾರ್ಥಿನಿ ಹೆಚ್.ಜಿ. ಗಾನವಿ ಅವರನ್ನು ಅವರ ನಿವಾಸಕ್ಕೆ ಭೇಟಿ ನೀಡಿ ಬೆಂಗಳೂರು ಇನ್ ಸೈಟ್ಸ್ ಸಂಸ್ಥಾಪಕ ಹಾಗೂ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ಗೌರವಿಸಿದರು.
ಮುಂದಿನ ದಿನಗಳಲ್ಲಿ ಐಎಎಸ್ ಪರೀಕ್ಷೆ ಬರೆಯಲು ಆಸಕ್ತಿ ತೋರಿದರೆ ಉಚಿತ ತರಬೇತಿ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ವಿನಯ್ ಕುಮಾರ್, ದಾವಣಗೆರೆ ಜಿಲ್ಲೆಗೆ ಟಾಪರ್ ಆಗಿ ಬಂದಿರುವ ಗಾನವಿ ಆರನೇ ರಾಂಕ್ ಪಡೆಯುವ ಗಮನ ಸೆಳೆದಿದ್ದಾಳೆ. ಇನ್ನೂ ಸ್ವಲ್ಪ ಕಠಿಣ ಅಭ್ಯಾಸ ಮಾಡಿದ್ದರೆ ಇನ್ನೂ ಒಳ್ಳೆಯ ರಾಂಕ್ ಪಡೆಯಬಹುದಿತ್ತು. ಆದರೂ ಕಠಿಣ ಪರಿಶ್ರಮದಿಂದ ಓದಿ ಶಾಲೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಗಾನವಿ ಅಭಿನಂದಾರ್ಹರು ಎಂದು ಹೇಳಿದರು.
ಈ ವೇಳೆ ಗಾನವಿ ತಂದೆ ಹೆಚ್.ಎನ್. ಗಿರೀಶ್ ಮತ್ತು ತಾಯಿ ಜ್ಯೋತಿ ಮತ್ತಿತರರು ಹಾಜರಿದ್ದರು.
ಕೊಳೇನಹಳ್ಳಿಗೆ ಭೇಟಿ: ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಅವರು ದಾವಣಗೆರೆ ತಾಲ್ಲೂಕಿನ ಹಳೇ ಕೊಳೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಹೆಚ್. ಬಸವರಾಜಪ್ಪ, ಶಿವಲಿಂಗಪ್ಪ, ಸಿದ್ದಪ್ಪ, ಬೀರೇಶ್, ಬಸವರಾಜ, ಅರುಣ ಕುಮಾರ್, ಕೆ.ಆರ್. ಬಸವರಾಜ, ಹೆಚ್.ಸಿ.ಬೀರೇಶ್, ತಿಪ್ಪೇಶ್, ಸಿದ್ದೇಶ್ ಮತ್ತಿತರರು ಇದ್ದರು.