ಮುಸಿಯಾ ಹಿಡಿಯಲು ಗ್ರಾಪಂ ಹಾಗೂ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ
ಹೊನ್ನಾಳಿ, ಮೇ 12- ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಮುಸಿಯಾ ಕಾಟ ಹೆಚ್ಚಾಗಿದ್ದು, ಗ್ರಾಮದ ಜನರು ಮನೆಯಿಂದ ಹೊರ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ 30ಕ್ಕೂ ಅಧಿಕ ಮುಸಿಯಾಗಳಿದ್ದು, ಅವುಗಳಲ್ಲಿ 1 ಮುಸಿಯಾ ವಿಚಿತ್ರವಾಗಿ ವರ್ತಿಸುವ ಜತೆಗೆ, ಮನೆಗೆ ನುಗ್ಗಿ ದಾಳಿ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಬೆಸಿಗೆಯ ಶಕೆಗೆ ಮನೆಯ ಕಿಟಕಿ ಹಾಗೂ ಬಾಗಿಲು ತೆರೆದರೆ ಮನೆಯೊಳಗೆ ನುಗ್ಗಲು ಕಾದು ಕುಳಿತಿರುತ್ತವೆ. ಈಗಾಗಲೇ ಮನೆಯ ಮುಂಭಾಗದಲ್ಲಿದ್ದ ಕುರ್ಚಿಗಳನ್ನು ಮುರಿದು ಹಾಕಿದ್ದರಿಂದ ಮನೆಯಲ್ಲಿನ ಹೆಣ್ಣುಮಕ್ಕಳು ಮುಸಿಯಾಗಳಿಗೆ ಹೆದರಿದ್ದಾರೆ ಎಂದು ಗ್ರಾಮಸ್ಥ ಜಿ.ಸಿ. ಸೋಮಶೇಖರ್ ಅವರು ಪತ್ರಿಕೆಗೆ ತಮ್ಮ ಅಳಲು ತೋಡಿಕೊಂಡರು.
ನಾನೂ ಕೂಡ ನನ್ನ ವೈಯಕ್ತಿಕ ಕೆಲಸದ ನಿಮಿತ್ತ ಹೊರಗೆ ಹೋಗದೇ ಮುಸಿಯಾಗಳನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವಾರು ಬಾರಿ ಸ್ಥಳೀಯ ಗ್ರಾ.ಪಂಚಾಯಿತಿ ಮತ್ತು ಚನ್ನಗಿರಿ ವಲಯದ ಅರಣ್ಯಾಧಿಕಾರಿಗಳಿಗೆ ಮುಸಿಯಾ ಗಳನ್ನು ಹಿಡಿಸುವಂತೆ ಮನವಿ ಮಾಡಿದರೆ, ಅವರು ಒಂದು ಮುಸಿಯಾ ಹಿಡಿಯಲು 600 ರೂ. ಬೇಕು. ನೀವೇ ಹಣ ಕೊಟ್ಟು ಅವುಗಳನ್ನು ಹಿಡಿಸಿ ಎಂದು ಬೇಜವಾಬ್ದಾರಿತನದಿಂದ ಉತ್ತರಿಸುತ್ತಾರೆ ಎಂದು ದೂರಿದರು.
ಸಂಬಂಧ ಪಟ್ಟ ಅಧಿಕಾರಿಗಳೇ ಹೀಗೆ ಹೇಳಿದರೆ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು. ತಕ್ಷಣವೇ ಈ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.