ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಸವ ಜಯಂತಿ ಕಾರ್ಯಕ್ರಮದಲ್ಲಿ ದಿನೇಶ್ ಕೆ.ಶೆಟ್ಟಿ
ದಾವಣಗೆರೆ, ಮೇ 12 – ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಛೇರಿಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು, 12ನೇ ಶತಮಾನದಲ್ಲೇ ಸಮಾಜದ ಕಟ್ಟಕಡೆಯ ಮನುಷ್ಯನನ್ನು ಗುರುತಿಸಿದವರು ಬಸವಣ್ಣನವರು ಎಂದು ತಿಳಿಸಿದರು.
`ಜಾತಿ ಸಂಕರವಾದ ಬಳಿಕ ಕುಲವನರಸುವರೇ ?’ ಎಂದು ಪ್ರಶ್ನಿಸಿ ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮತ್ತು ಪಂಚಮರಿಗೆ ಮೊದಲ ಬಾರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು ಎಂದರು.
ಮಹಿಳಾ ಕಾಂಗ್ರೆಸ್‍ನ ಶ್ರೀಮತಿ ರಾಜೇಶ್ವರಿ ಮಾತನಾಡಿ, ಭಾರತದಲ್ಲಿ ವಿವಿಧ ಜಾತಿಗಳ ಕಾಯಕ ಜೀವಿಗಳು ಮೊದಲ ಬಾರಿಗೆ ಜಾತಿಯನ್ನು ಮೀರಿ ಒಂದು ವರ್ಗವಾಗಿದ್ದು, ಶರಣ ಸಂಕುಲದಲ್ಲಿ ಎಂಬುದು ಹೆಮ್ಮೆಯ ವಿಚಾರವಾಗಿದೆ ಎಂದರು.
ತಮ್ಮ ಕಾಯಕಗಳ ಹೆಸರುಗಳನ್ನು ಅಭಿಮಾನದಿಂದ ಉಳಿಸಿಕೊಂಡರು. ಆದರೆ ಆ ಕಾಯಕಗಳ ಒಳಗೆ ಇದ್ದ ಜಾತಿ ವಿಷವನ್ನು ಹೊರ ಹಾಕಿದರು. ಹೀಗೆ ಶರಣರಲ್ಲಿ ಸಮಗಾರ, ಮಾದಾರ, ಮೇದಾರ, ಡೋಹರ, ಅಂಬಿಗ ಮುಂತಾದ ಪದಗಳು ಜಾತಿ ಸೂತಕವನ್ನು ಕಳೆದುಕೊಂಡು ಕಾಯಕ ಸೂಚಕಗಳಾಗಿ ಉಳಿದವು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಗೀತಾ ಚಂದ್ರಶೇಖರ್, ದ್ರಾಕ್ಷಾಯಣಮ್ಮ, ಸುನೀತಾ ಭೀಮಣ್ಣ, ಕಾವ್ಯ, ವನಜಾ, ಮತ್ತಿತರರಿದ್ದರು.