ಹರಪನಹಳ್ಳಿ, ಮೇ 12- ಇಲ್ಲಿನ ಮೇಗಳ ಪೇಟೆಯ ಬಸವೇಶ್ವರ ದೇವರ ರಥೋತ್ಸವವು ಶುಕ್ರವಾರ ಸಂಜೆ ಭಕ್ತರ ಹರ್ಷೋದ್ಘಾರದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು.
ಬಸವೇಶ್ವರ ಜಯಂತಿ ಪ್ರಯುಕ್ತ ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜಾಲಂಕಾರ ಹಾಗೂ ಅಭಿಷೇಕ ಕಾರ್ಯಕ್ರಮ ನಡೆದವು. ಭಕ್ತರು ತೆಂಗಿನಕಾಯಿ ಹಾಗೂ ನೈವೇದ್ಯ ಅರ್ಪಿಸಿ ದೇವರ ದರ್ಶನ ಪಡೆದರು.
ವಿವಿಧ ಬಗೆಯ ಪುಷ್ಪ ಹಾಗೂ ರಂಗು ರಂಗಿನ ವಸ್ತ್ರಾಲಂಕಾರಗೊಂಡ ರಥೋತ್ಸವ ಜರುಗುವಾಗ ಭಕ್ತರ ಜಯಘೋಷದ ಸಂಭ್ರಮ ಮುಗಿಲು ಮುಟ್ಟಿತ್ತು.
ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು ತೇರಿಗೆ ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಇದೇ ವೇಳೆ ಜೋಡೆತ್ತುಗಳ ಮೆರವಣಿಗೆ ರಥೋತ್ಸವದ ಸೊಬಗನ್ನು ಇಮ್ಮಡಿಗೊಳಿಸಿತು.
ವೀರಶೈವ ಮಹಾಸಭಾದ ಅಧ್ಯಕ್ಷ ಎಂ. ರಾಜಶೇಖರ್, ಪಂಚಮಸಾಲಿ ಸಮಾಜದ ಅಧ್ಯಕ್ಷ ಪಿ. ಬೆಟ್ಟನಗೌಡ್ರು, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಪಿ.ಎಲ್.ಡಿ. ಬ್ಯಾಂಕ್ನ ಅಧ್ಯಕ್ಷ ಪಿ.ಬಿ. ಗೌಡ, ನಿವೃತ್ತ ಇಓ ಎಚ್.ಎಂ.ಕೊಟ್ರಯ್ಯ, ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ. ರಾಜಶೇಖರ್, ಮುಖಂಡರಾದ ಕೌಟಿ ಮಂಜುನಾಥ್, ಜಾಲಿಮರದ ಅಜ್ಜಣ್ಣ, ಜೆ. ಸೋಮಶೇಖರ್, ಗುರುಪ್ರಸಾದ್, ಚಂದ್ರಶೇಖರ್ ಸೇರಿದಂತೆ, ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.