ದಾವಣಗೆರೆ, ಮೇ 12 – ಬಸವಣ್ಣನವರು ಸಮಾನತೆ, ಜಾತ್ಯತೀತ ಮತ್ತು ಭ್ರಾತೃತ್ವದ ಸಮಾಜ ನಿರ್ಮಿಸುವ ಪಣ ತೊಟ್ಟು ಜಾತಿ, ಧರ್ಮ ಹಾಗೂ ಲಿಂಗ ಭೇದವನ್ನು ತಿರಸ್ಕರಿಸಿ ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದಾರೆ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ
ಎಲ್.ಎಚ್. ಅರುಣ್ ಕುಮಾರ್ ಹೇಳಿದರು.
ನಗರದ ಕೆ.ಬಿ. ಬಡಾವಣೆಯಲ್ಲಿನ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರು ಸಮಬಾಳಿನ ಸಮತೆಯ ಸಮಾಜ ಕಟ್ಟಲು ಹೋರಾಡಿದ್ದಾರೆ ಮತ್ತು ಕಾಯಕ ಜೀವಿಗಳು, ದಲಿತರು, ದಮನಿತರು, ಮಹಿಳೆಯರು ವಚನ ಚಳವಳಿಯಲ್ಲಿ ಪಾಲ್ಗೊ ಳ್ಳುವಂತೆ ಪ್ರೇರೇಪಿಸಿ ಮಹಾ ಮಾನವತಾ ವಾದಿಯಾಗಿದ್ದಾರೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಮಾತನಾಡಿ, ಬಸವಣ್ಣನವರು ಎಲ್ಲರಿಗೂ ವೈಚಾರಿಕ ಗುರುವಾಗಿದ್ದು, ಅಂಧಶ್ರದ್ಧೆ, ಮೂಢನಂಬಿಕೆ, ಶೋಷಣೆಗಳ ವಿರುದ್ಧ ಹೋರಾಟ ನಡೆಸಿ, ಜನರನ್ನು ಜಾಗೃತಗೊಳಿಸಿದರು ಎಂದರು.
ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಗೌರವಾಧ್ಯಕ್ಷ ಎಂ.ಎಸ್. ನಾಗರಾಜಪ್ಪ ಮಾತನಾಡಿ, ಬಸವಣ್ಣವರ ವಚನಗಳೇ ಸಂವಿಧಾನದ ಆಶಯಗಳಾಗಿದ್ದು, ಅವರು ನಿರ್ಮಿಸಿದ ಅನುಭವ ಮಂಟಪ ಪ್ರಜಾಪ್ರಭುತ್ವದ ಮೊದಲ ಸಂಸತ್ತು ಆಗಿತ್ತು ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಎಂ. ಪರಮೇಶ್ವರಪ್ಪ ಸಿರಿಗೆರೆ ಮಾತನಾಡಿ, ವಚನ ಚಳುವಳಿ ಮೂಲಕ ಮಹಿಳಾ ಹೋರಾಟಗಾರರನ್ನು ಬೆಳಕಿಗೆ ತಂದ ಶರಣರ ಪರಂಪರೆ ನಮಗೆಲ್ಲರಿಗೂ ಆದರ್ಶ ಎಂದರು.
ಸಾಹಿತಿ ಡಾ.ಎ. ಶಿವನಗೌಡ ಕಡಬಗೆರೆ, ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್.ರಾಜು, ಸಾಹಿತಿ ಎಸ್.ಸಿದ್ದೇಶ್ ಕುರ್ಕಿ, ಎಂ.ಎಸ್.ಶಿವಕುಮಾರ ಸ್ವಾಮಿ, ವಕೀಲ ಆರ್.ಯೋಗೇಶ್ವರಪ್ಪ ಇದ್ದರು.