ವಿದ್ಯಾರ್ಥಿಗಳಿಗೆ ಬಸವಣ್ಣನ ನಡೆ-ನುಡಿ ಸಿದ್ಧಾಂತದ ಅಗತ್ಯವಿದೆ

ವಿದ್ಯಾರ್ಥಿಗಳಿಗೆ ಬಸವಣ್ಣನ ನಡೆ-ನುಡಿ ಸಿದ್ಧಾಂತದ ಅಗತ್ಯವಿದೆ

ಯುಬಿಡಿಟಿ ಕಾಲೇಜಿನ  ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಿವನಕೆರೆ ಬಸವಲಿಂಗಪ್ಪ

ದಾವಣಗೆರೆ,ಮೇ 12- ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಪರಿವರ್ತನೆ ಸಮಗ್ರ ಕ್ರಾಂತಿಯ ಪ್ರತೀಕ. ಹಾಗಾಗಿಯೇ ಅವರನ್ನು ಕರ್ನಾಟಕ ಸರ್ಕಾರ ‘ವಿಶ್ವ ಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದೆ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ ಹೇಳಿದರು. 

ವಿಶ್ವ ವಿದ್ಯಾನಿಲಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ಸಂಸ್ಥಾಪಕ. ಸಮಸಮಾಜದ ಸಂವಿಧಾನ ಶಿಲ್ಪಿ ಇತ್ಯಾದಿ ಬಹುಮುಖ  ವ್ಯಕ್ತಿತ್ವದ ಬಸವಣ್ಣನವರ ಪರಿಚಯ ಇಂದು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತುರ್ತಾಗಿ ಆಗಬೇಕಿದೆ.  ಹಾಗಾಗಿ ಪಠ್ಯದಲ್ಲಿ ಬಸವ ಚರಿತ್ರೆ, ಶರಣರ ವಚನಗಳು ಅಳವಡುವಂತೆ ಆಗಬೇಕು. ಸಂವಾದ ಗೋಷ್ಟಿಗಳು ನಡೆಯಬೇಕು. ನಡೆ-ನುಡಿ ಸಿದ್ಧಾಂತದ ಅಗತ್ಯವನ್ನು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮನದಟ್ಟು ಮಾಡಬೇಕು ಎಂದು ತಿಳಿಸಿದರು.   ಬಸವಣ್ಣನವರು ಕಲ್ಯಾಣದಲ್ಲಿ   `ಮಾನವೀಯ ಸಮಾಜ ನಿರ್ಮಾಣ’ ಮಾಡುವಲ್ಲಿ   ಸಮ-ಸಮಾಜದ ಕಲ್ಪನೆ, ಸರ್ವರಿಗೂ ಸಮಪಾಲು, ಸಮಬಾಳೆಂಬ ಆರ್ಥಿಕ ಚಿಂತನೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆ, ವರ್ಣ, ವರ್ಗ, ಲಿಂಗ, ಜಾತಿಗಳ ನಿರಾಕರಣೆ, ಸ್ಥಾವರ ನಿರಾಕರಣೆ, ಜಂಗಮ ಪುರಸ್ಕರಣೆ, ವೇದ, ಪುರಾಣ, ಶಾಸ್ತ್ರ, ಆಗಮಗಳ ಬಗ್ಗೆ, ವೈಚಾರಿಕವಾದ ಮಾನವೀಯ ಸ್ಪಷ್ಟ ನಿಲುವು, ಮೌಢ್ಯಗಳ ನಿರಾಕರಣೆ, ನೈತಿಕ ನೆಲೆಗಟ್ಟು ಮುಂತಾದ ಶರಣ ಸಿದ್ದಾಂತಗಳಿಗೆಲ್ಲ ನಡೆ-ನುಡಿ ಸಿದ್ಧಾಂತದ ಮೂಲಕ ಭದ್ರ ಬುನಾದಿ ಹಾಕಿದರು. 

ಇಂತಹ ಎಲ್ಲಾ ಶರಣರ ತತ್ವಗಳನ್ನು ಬಸವಣ್ಣ ಹಾಗೂ 1,96,000 ಶರಣರು ಮತ್ತು 770 ಅಮರಗಣಂಗಳು ಒಟ್ಟಾಗಿಯೇ ಕಾರ್ಯನಿರ್ವಹಿಸಿದ್ದರಿಂದ ಮಾನವೀಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಯಿತು. ಈಗಲೂ ಸಹ ಇದೇ ರೀತಿಯ ಕಾರ್ಯಾಚರಣೆಗಳು ನಡೆಯಬೇಕೆಂದು ಆಶಿಸಿದರು. 

ಪ್ರಾಂಶುಪಾಲ  ಡಾ.ಡಿ.ಪಿ.ನಾಗರಾಜಪ್ಪ    ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ.ಎನ್.ನಾಗೇಶ್  ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾ ಪಕ ಡಾ.ಎಂ.ಹೆಚ್.ದಿವಾಕರ್‍ ವಂದಿಸಿದರು. ಕುಮಾರಿ ಶ್ವೇತಾ ಕೆ.ವಿ ನಿರೂಪಿಸಿದರು.

error: Content is protected !!