ಸಮ ಸಮಾಜದ ಪಿತಾಮಹ ವಿಶ್ವಗುರು ಬಸವಣ್ಣ

ಸಮ ಸಮಾಜದ ಪಿತಾಮಹ ವಿಶ್ವಗುರು ಬಸವಣ್ಣ

ಬಸವ ಪ್ರಭಾತ್‌ಪೇರಿ ಉದ್ಘಾಟನೆಯಲ್ಲಿ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ, ಮೇ 8 – ಬಸವಣ್ಣ ಬರೀ ಲಿಂಗಾಯತರ, ಕನ್ನಡಿಗರ ಸ್ವತ್ತು ಅಲ್ಲ, ಇಡೀ ಮಾನವ ಕುಲಕ್ಕೇ ಬೇಕಾಗಿರುವಂತಹ ವಿಶ್ವಗುರು. ಎಲ್ಲರ ಪರವಾಗಿ ಹೋರಾಟ ಮಾಡಿದ ಮಹಾ ಮಾನವತಾವಾದಿ ಎಂದರೆ ಅದು 12ನೇ ಶತಮಾನದ ಬಸವಣ್ಣನವರು ಎಂದು ವಿರಕ್ತಮಠದ   ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. 

ನಗರದ ವಿರಕ್ತಮಠದಲ್ಲಿ ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ (ವೀರಶೈವ) ತರುಣ ಸಂಘದ ಸಹಯೋಗದಲ್ಲಿ 112ನೇ ವರ್ಷದ ಬಸವ ಜಯಂತ್ಯೋತ್ಸವದ ಅಂಗವಾಗಿ ಮೊನ್ನೆ ನಡೆದ 108ನೇ ವರ್ಷದ ಬಸವ ಪ್ರಭಾತ್ ಪೇರಿಯ ಮೊದಲ ದಿನದ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.

ಬಸವ ತತ್ವಗಳ ಪಾಲನೆಯಿಂದ ಸಮೃದ್ಧ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಕಾಯಕ ತತ್ವ, ದಾಸೋಹ ತತ್ವದಿಂದ, ಬಸವ ತತ್ವ ಪಾಲನೆಯಿಂದ ದೇಶದ ಉದ್ಧಾರ ಸಾಧ್ಯ. ಇಂತಹ ತತ್ವಗಳನ್ನು ಪ್ರತಿಯೊಬ್ಬರೂ ಕೂಡಾ ಆಚರಣೆ ಮಾಡೋಣ. ಇಂತಹ ತತ್ವಗಳನ್ನು ಮನೆ – ಮನಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ 108 ವರ್ಷಗಳಿಂದ ಈ  ವಿರಕ್ತಮಠದಿಂದ ಬಸವ ಪ್ರಭಾತ್ ಪೇರಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.  

ಬಸವ ಜಯಂತಿ ಆಚರಣೆ 1913ರಲ್ಲಿ ಮೊಟ್ಟ ಮೊದಲು ಪ್ರಾರಂಭವಾಗಿದ್ದು, ದಾವಣಗೆರೆಯ ವಿರಕ್ತಮಠದಿಂದ ಈ ಬಸವ ಪ್ರಭಾತ್ ಪೇರಿ ಆರಂಭವಾಗಲು ಕಾರಣ ಹರ್ಡೇಕರ್ ಮಂಜಪ್ಪ ಮತ್ತು ಜಯದೇವ ಜಗದ್ಗುರುಗಳು ಹಾಗೂ ಮೃತ್ಯುಂಜಯ ಅಪ್ಪಗಳು. 

ಅಂದಿನ ಬ್ರಿಟೀಷರ ಕಾಲದಲ್ಲಿ ಯಾರೂ ಸಹಾ ಜನರು ಸೇರುವಂತಿರಲಿಲ್ಲ. ಜನ ಸೇರಿ ಸಭೆ ನಡೆಸಿದರು ಎಂದರೆ ಬ್ರಿಟೀಷರು ಗುಂಡೇಟಿಗೆ ಬಲಿ ಆಗಬೇಕಿತ್ತು. ಇವರೆಲ್ಲ ಒಗ್ಗಟ್ಟಾದರೂ ಎಂದರೆ ಇವರಿಗೆ ಸ್ವಾತಂತ್ರ್ಯ ಕೊಡಬೇಕು ಎಂದು ಯಾರಿಗೂ ಒಗ್ಗಟ್ಟಾಗಿ ಇರಲು ಬಿಡುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಮಹಾರಾಷ್ಟದಲ್ಲಿ ಬಾಲಗಂಗಾಧರ ತಿಲಕ್ ಅವರು ಗಣೇಶನ ಹಬ್ಬ ಮಾಡಿ ಸಾವಿರಾರು ಜನರನ್ನು ಸೇರಿಸಿ ಸ್ವಾತಂತ್ರ್ಯ ಚಳುವಳಿಗೆ ಜನರನ್ನು ಸಂಘಟನೆ ಮಾಡಿದರು. ಅದೇ ರೀತಿ 1917ರಲ್ಲಿ ಹರ್ಡೇಕರ್ ಮಂಜಪ್ಪನವರು ದಾವಣಗೆರೆಯಲ್ಲಿ ಬಸವ ಪ್ರಭಾತ್ ಪೇರಿಯನ್ನು ಆರಂಭಿಸಿದರು ಎಂದರು.

ಬಸವಣ್ಣನವರ ವಚನಗಳೇ ಇಂದಿನ ಸಂವಿಧಾನವಾಗಿದೆ. ಅವರು ನೀಡಿದ ಸಮಾನತೆ, ಕಾಯಕ, ದಾಸೋಹ, ವಿಶ್ವ ಪ್ರೇಮ ಎಲ್ಲವೂ ಇಂದಿನ ಸಂವಿಧಾನದಲ್ಲಿವೆ. ಅಂತಹ ಬಸವಣ್ಣನವರನ್ನು ಬ್ರಿಟೀಷರು ಮೊಟ್ಟಮೊದಲ ಪ್ರಜಾ ಪ್ರಭುತ್ವದ ಪರಿಕಲ್ಪನೆಯ ಪಿತಾಮಹ ಎಂದು ಅರ್ಥ ಥೇಮ್ಸ್ ನದಿ ದಂಡೆಯ ಮೇಲೆ ಬಸವಣ್ಣವರ ಪ್ರತಿಮೆಯನ್ನು ಸ್ಥಾಪನೆ ಮಾಡಿದರು. ಬಸವಣ್ಣನವರು ವಿದೇಶದವರಿಗೆ ಅರ್ಥವಾಗುತ್ತಿದ್ದಾರೆ. ಆದರೆ ನಮ್ಮ ದೇಶ, ರಾಜ್ಯದ ಜನತೆಗೆ ಅರ್ಥವಾಗದೇ ಇರುವುದು ಬೇಸರದ ಸಂಗತಿ. ಬಸವಣ್ಣನವರ ತತ್ವಗಳನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೋ, ಯಾರು ಆಚರಣೆ ಮಾಡುತ್ತಾರೋ ಅವರು ಎಂದಿಗೂ ನೋವನ್ನು ಕೊಡಲು ಹೋಗುವುದಿಲ್ಲ. ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವವರು ಮನೆಯಲ್ಲಿನ ತಂದೆ-ತಾಯಿ, ಅತ್ತೆ-ಮಾವ, ಅವರ ಕುಟುಂಬದವರನ್ನು ಪ್ರೀತಿ ಮಾಡುತ್ತಾರೆ. ಬಸವ ತತ್ವ ಎಲ್ಲಿ ಇರುತ್ತೋ ಅಲ್ಲಿ ಪ್ರೀತಿ, ಶಾಂತಿ, ನೆಮ್ಮದಿ ಇರುತ್ತದೆ. ಇದರಿಂದ ಸುಖೀ ಕುಟುಂಬ, ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದರು. 

ಬಸವ ತತ್ವ ಪಾಲನೆ ಮಾಡುತ್ತಾರೋ ಅಲ್ಲಿ ಯಾವುದೇ ದೇಶ-ದೇಶಗಳ ಯುದ್ಧಗಳು ಆಗುವುದಿಲ್ಲ, ಮನೆಯಲ್ಲಿಯೂ ಯುದ್ದಗಳು ಆಗುವುದಿಲ್ಲ. ಮನೆ, ದೇಶಗಳಲ್ಲಿ ಜಗಳಗಳು ಇರಬಾರದು ಎಂದರೆ ಎಲ್ಲರೂ ಸಹಾ ಬಸವ ತತ್ವಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗುರುಮಠಕಲ್ ಮುರುಘ ಶಾಂತವೀರ ಸ್ವಾಮೀಜಿ,  ಹಿರಿಯೂರಿನ ಆದಿ ಜಾಂಭವ ಮಠದ ಷಡಾಕ್ಷರಿಮುನಿ ಮಹಾ ಸ್ವಾಮೀಜಿ, ಕಣಕುಪ್ಪಿ ಮುರುಗೇಶಪ್ಪ, ಲಂಬಿ ಮುರುಗೇಶ, ಕುದರಿ ಉಮೇಶ, ಚನ್ನಬಸವ ಶೀಲವಂತ್, ಮಹಾದೇವಮ್ಮ, ಮಹಾಲಿಂಗೇಶ್ವರ, ಶಿವಬಸಮ್ಮ, ವೀಣಾ ಮಂಜುನಾಥ, ಮಲ್ಲಿಕಾ ರ್ಜುನ್, ಜಯರಾಜ್, ಬಿ.ಎಚ್.ವೀರಭದ್ರಪ್ಪ, ಮಲ್ಲಿಕಾರ್ಜುನ್, ಹನುಮಂತಪ್ಪ, ವಿರಕ್ತಮಠ ಶಾಲೆಯ ರೋಷನ್, ಬಕ್ಕೇಶ್ವರ ಶಾಲೆ ಶಿಕ್ಷಕರು, ಶರಣಬಸವ, ಕೀರ್ತಿ, ಕುಮಾರಸ್ವಾಮಿ, ಶ್ರೀಮಠದ ಭಕ್ತರು ಭಾಗವಹಿಸಿದ್ದರು. 

ಬಸವ ಕಲಾಲೋಕದವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!