ದಾವಣಗೆರೆ, ಮೇ 6- ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಭಾರತ. ಇಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾರ ತನ್ನ ಅಮೂಲ್ಯ ಮತ ಚಲಾವಣೆ ಮೂಲಕ ಪ್ರಜಾಪ್ರಭುತ್ವಕ್ಕೆ ಶಕ್ತಿಯನ್ನು ತುಂಬುತ್ತಾನೆ. ಹಾಗಾಗಿ ಪ್ರತಿಯೊಬ್ಬ ಮತದಾರನೂ ತಪ್ಪದೇ ಮತದಾನ ಮಾಡಬೇಕು. ಇದು ಮತದಾನ ಜಾಗೃತಿ ಅಭಿಯಾನದ ಉದ್ದೇಶ ಕೂಡಾ ಆಗಿದೆ. ಪ್ರಜ್ಞಾವಂತ ಮತದಾರರಿಂದ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ಅವರು ತಿಳಿಸಿದರು.
ಜಿಲ್ಲಾ ಮತ್ತು ತಾಲ್ಲೂಕು ಕಸಾಪ., ತಾ.ಪಂ., ಗ್ರಾ.ಪಂ. ಎಲೇಬೇತೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀ ವಂದೇ ಮಾತರಂ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಎಲೇಬೇತೂರು ಹಾಗೂ ಆರೋಗ್ಯ ಇಲಾಖೆ ಎಲೆಬೇತೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಎಲೆಬೇತೂರಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಹಾಗೂ ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಾವಣಗೆರೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಮಭೋವಿ ಬಿಳಿ ಪರದೆಯ ಮೇಲೆ ನನ್ನ ದೇಶ ನನ್ನ ಮತ ಎಂದು ಒಕ್ಕಣೆ ಬರೆಯು ವುದರ ಮೂಲಕ ರಂಗೋಲಿ ಸ್ಪರ್ಧೆ ಮತ್ತು ಕೈಗೆ ಮೆಹಂದಿ ಹಾಕುವುದರ ಮೂಲಕ ಮತದಾನ ಜಾಗೃತಿಗೆ ಚಾಲನೆ ನೀಡಿದರು. ನಂತರ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಾ. ರುದ್ರಮುನಿ ಹಿರೇಮಠ್ ಮತದಾನ ಜಾಗೃತಿ ಕುರಿತಾಗಿ ಉಪನ್ಯಾಸ ನೀಡಿದರು.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಪ್ರಾಸ್ತಾವಿಕ ನುಡಿಯನ್ನಾಡಿದರು. ಪಿಡಿಓ ಶ್ರೀಮತಿ ಎ. ಅಂಬಿಕಾ ಅವರು ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಗಂಗವ್ವ ಅಜ್ಜಪ್ಪ, ಬೇತೂರಿನ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಗುಣಶೀಲ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಜಗದೀಶ್ ಕೂಲಂಬಿ, ತಾಲ್ಲೂಕು ಕಸಾಪ ನಿರ್ದೇಶಕ ಷಡಾಕ್ಷರಪ್ಪ ಎಂ.ಬೇತೂರು, ಶಿವಕುಮಾರ್ ಆರ್. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸೌಮ್ಯ ಮಠದ್ ಉಪಸ್ಥಿತರಿದ್ದರು.
ಆಶಾ ಪ್ರಾರ್ಥಿಸಿದರು. ಷಡಾಕ್ಷರಪ್ಪ ಎಂ. ಬೇತೂರು ಸ್ವಾಗತಿಸಿದರು. ದಾಗಿನಕಟ್ಟೆ ಪರಮೇಶ್ವರಪ್ಪ ನಿರೂಪಿಸಿದರು.