ಪೌರಕಾರ್ಮಿಕರು, ಬಡವರಿಗೆ ಸೂರು ಕಲ್ಪಿಸಿದ್ದು ಕಾಂಗ್ರೆಸ್ : ಶಾಸಕ ಶಾಮನೂರು ಶಿವಶಂಕರಪ್ಪ
ಸಂವಿಧಾನ ರಕ್ಷಣೆ, ಎಲ್ಲಾ ವರ್ಗದವರ ಹಿತ ಕಾಪಾಡಲಾಗುವುದು : ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ, ಮೇ 5 – ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ 1,6,5 ಮತ್ತು 45ನೇ ವಾರ್ಡ್ಗಳ ವ್ಯಾಪ್ತಿಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮತ ಯಾಚಿಸಿದರು.
ನಂತರ ಎಸ್ಸೆಸ್ ಮಾತನಾಡಿ, ಈ ಭಾಗದ ಪೌರಕಾರ್ಮಿಕರು ಮತ್ತು ಬಡವರಿಗೆ ಸೂರು ಕಲ್ಪಿಸಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ಯಾರೂ ಮರೆಯಬಾರದು. ಸೂರು ಕಲ್ಪಿಸುವುದರ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಅದೇ ರೀತಿ ರಾಜ್ಯ ಸರ್ಕಾರ ನೀಡುವ ಯೋಜನೆಗಳನ್ನು ಯಾವುದೇ ಏಜೆಂಟ್ರು ಇಲ್ಲದೇ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ತಿಳಿಸಿ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುವ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ನನ್ನನ್ನು ಬೆಂಬಲಿಸಿದಂತೆ ಅತ್ಯಧಿಕ ಮತಗಳನ್ನು ನೀಡುವ ಮೂಲಕ ಜಯಶೀಲರನ್ನಾಗಿ ಮಾಡಬೇಕೆಂದು ಕರೆ ನೀಡಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ, ಸಂವಿಧಾನ ರಕ್ಷಣೆ ಮತ್ತು ಎಲ್ಲಾ ವರ್ಗಗಳ ಹಿತ ಕಾಪಾಡುವುದು ನನ್ನ ಧ್ಯೇಯ ಎಂದು ತಿಳಿಸಿ ಈ ಭಾಗದಲ್ಲಿ ನಮ್ಮ ಮಾವನವರು ಅಭಿವೃದ್ಧಿ ಮಾಡಿದ್ದು, ಅವರಿಗೆ ಸದಾ ಬೆಂಬಲಿಸುತ್ತಿರುವ ತಾವುಗಳು ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ರೂ.122 ಕೋಟಿಯಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.
ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸುವುದು, ನರೇಗಾ ಕೂಲಿ ಹಣವನ್ನು ರೂ. 400ಕ್ಕೆ ಹೆಚ್ಚಿಸಲಾಗುವುದು ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರರಾದ ಯು.ಟಿ. ಫರ್ಜಾನ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಜಿ.ಡಿ. ಪ್ರಕಾಶ್, ಎಲ್.ಡಿ. ಗೋಣೆಪ್ಪ, ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್, ಉದಯಕುಮಾರ್, ಎನ್. ನೀಲಗಿರಿಯಪ್ಪ, ಟಿ. ರಮೇಶ್, ಬಿ.ಎಂ. ರಾಮಸ್ವಾಮಿ, ಯುವ ಕಾಂಗ್ರೆಸ್ನ ಸಾಗರ್, ಮಾಜಿ ಮೇಯರ್ ಹೆಚ್.ಬಿ. ಗೋಣೆಪ್ಪ, ಸಾಲುಮನಿ ಬಸವರಾಜ್, ಎಂ.ಮಂಜುನಾಥ್, ಜಮ್ನಳ್ಳಿ ನಾಗರಾಜ್, ಡಿ.ಎಸ್. ಸುರೇಶ್, ಇಟ್ಟಿಗುಡಿ ಮಂಜುನಾಥ್, ಆರ್. ವಾಸುದೇವ್, ವಿಜಯಕುಮಾರ್, ಅಣ್ಣಪ್ಪ, ಮಂಜಮ್ಮ, ಬಾಲಾಜಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.