ಶ್ರೀಮಂತರ ಪರ ಇರುವ ಬಿಜೆಪಿಯನ್ನು ಎಂದಿಗೂ ನಂಬಬೇಡಿ

ಶ್ರೀಮಂತರ ಪರ ಇರುವ ಬಿಜೆಪಿಯನ್ನು ಎಂದಿಗೂ ನಂಬಬೇಡಿ

ಜಿಗಳಿಯಲ್ಲಿ ಡಿಎಸ್ಎಸ್ ರಾಜ್ಯ ಸಂಚಾಲಕ ಹೆಗ್ಗೆರೆ ರಂಗಪ್ಪ ಮನವಿ

ಮಲೇಬೆನ್ನೂರು, ಮೇ 2- ಶ್ರೀಮಂತರ ಪರ ಆಡಳಿತ ನೀಡುವ ಬಿಜೆಪಿಯನ್ನು ಎಂದಿಗೂ ನಂಬಬೇಡಿ. ಬಡವರ, ರೈತರ, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಗಳ ಜನರ ಹಿತ ಕಾಪಾಡುವ ಕಾಂಗ್ರೆಸ್ ಅನ್ನು ಎಂದಿಗೂ ಕೈ ಬಿಡಬೇಡಿ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಗ್ಗೆರೆ ರಂಗಪ್ಪ ಹೇಳಿದರು.

ಅವರು, ಗುರುವಾರ ಹರಿಹರ ತಾಲ್ಲೂಕಿನ ಕುಂಬಳೂರು, ಜಿಗಳಿ, ಜಿ.ಬೇವಿನಹಳ್ಳಿ, ಹಳ್ಳಿಹಾಳ್, ಕೊಕ್ಕನೂರು, ಹಿಂಡಸಘಟ್ಟಿ, ಉಕ್ಕಡಗಾತ್ರಿ, ವಾಸನ, ಪಾಳ್ಯ, ಕೆ.ಎನ್.ಹಳ್ಳಿ, ಸಿರಿಗೆರೆ, ಭಾನುವಳ್ಳಿ ಗ್ರಾಮಗಳ ಎ.ಕೆ.ಕಾಲೋನಿಗಳಿಗೆ ತೆರಳಿ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಜಿಗಳಿಯಲ್ಲಿ ಮಾತನಾಡಿದರು.

ಒಂದೇ ಒಂದು ಮತದಿಂದ ಎಂ.ಪಿ, ಎಂಎಲ್ಎ ಆಗಿದ್ದಾರೆ. ಒಂದೇ ಒಂದು ಮತದ ಕೊರತೆಯಿಂದಾಗಿ ದೇಶದಲ್ಲಿ ಪ್ರಧಾನಿ ಹುದ್ದೆ ಕಳೆದುಕೊಂಡಿರುವವರಿದ್ದಾರೆ. ಹಾಗಾಗಿ ಯಾರೂ ಮತದಾನದಿಂದ ದೂರ ಉಳಿಯದೇ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬೇಕೆಂದು ಹೆಗ್ಗೆರೆ ರಂಗಪ್ಪ ಜನರಲ್ಲಿ ಮನವಿ ಮಾಡಿದರು.

ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಬಸವರಾಜ್ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನ ಉಳಿಯಬೇಕಾದರೆ ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು.ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಬಡವರ, ಮಧ್ಯಮ ವರ್ಗದವರ ಬದುಕಿಗೆ ಆಸರೆಯಾಗಿವೆ ಎಂದರು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ ಮಾತನಾಡಿ, ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಬೆಂಬಲ ಸಿಗುತ್ತಿದ್ದು, ಅವರ ಅಧಿಕ ಮತಗಳಿಂದ ಗೆಲ್ಲುತ್ತಾರೆ ಎಂದರು.

ಡಿಎಸ್ಎಸ್ ಜಿಲ್ಲಾ ಸಂಚಾಲಕ ಹಾಗೂ ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಕೆ.ಅಡಿವೇಶ್ (ಹಾಲೇಶ್) ಮಾತನಾಡಿ, 400 ಸೀಟ್‌ ಗೆದ್ದರೆ ಬಿಜೆಪಿಯವರು ಸಂವಿಧಾನ ಬದಲಿಸುವ ಸಂಚು ರೂಪಿಸಿದ್ದು, ಈ ಬಗ್ಗೆ ಜನರು ಜಾಗೃತರಾಗಬೇಕೆಂದರು.

ಜಿಗಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ದೇವೇಂದ್ರಪ್ಪ, ಡಿಎಸ್ಎಸ್‌ನ ಬಾತಿ ಸಿದ್ದೇಶ್, ಚಿಕ್ಕನಹಳ್ಳಿ ಮಲ್ಲೇಶ್, ಗ್ರಾಮದ ಡಿ.ಮಂಜುನಾಥ್, ಎ.ಕೆ.ಜಯ್ಯಪ್ಪ, ಎ.ಕೆ.ರಂಗಪ್ಪ, ಸುರೇಶ್, ಚಂದ್ರಪ್ಪ, ಪ್ರಭಾಕರ್, ಶಶಿ, ಚೌಡಪ್ಪ, ಡಿ.ಬಸಣ್ಣ, ಬಾಲವ್ವರ ರಂಗಪ್ಪ, ಪೋಸ್ಟ್ ಮಂಜುನಾಥ್ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.

error: Content is protected !!