ದೇಶಕ್ಕೆ ಸ್ವಾತಂತ್ರ ಲಭಿಸಿ 7 ದಶಕಗಳಾದರೂ ಕಾರ್ಮಿಕರಿಗೆ ಇನ್ನೂ ಸಿಗದ ಭದ್ರತೆ

ದೇಶಕ್ಕೆ ಸ್ವಾತಂತ್ರ ಲಭಿಸಿ 7 ದಶಕಗಳಾದರೂ ಕಾರ್ಮಿಕರಿಗೆ ಇನ್ನೂ ಸಿಗದ ಭದ್ರತೆ

ಎಐಟಿಯುಸಿ ನಡೆಸಿದ ಕಾರ್ಮಿಕ ದಿನಾಚರಣೆಯಲ್ಲಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಬಿ. ಅಮ್ಜದ್‌ ಆತಂಕ

ದಾವಣಗೆರೆ, ಮೇ 1- ದೇಶಕ್ಕೆ ಸ್ವತಂತ್ರ ಲಭಿಸಿ 7 ದಶಕಗಳು ಕಳೆದರು, ಇಂದಿಗೂ ಕಾರ್ಮಿಕರ ಬದುಕಿಗೆ ಭದ್ರತೆ ಸಿಗುತ್ತಿಲ್ಲ ಎಂದು ಎ.ಐ.ಟಿ.ಯು.ಸಿ ರಾಜ್ಯ ಉಪಾಧ್ಯಕ್ಷ ಬಿ. ಅಮ್ಜದ್‌ ಆತಂಕ ವ್ಯಕ್ತಪಡಿಸಿದರು.

ನಗರದ ಜಯದೇವ ವೃತ್ತದ ಶ್ರೀನಿವಾಸ್‌ ಕುಲಕರ್ಣಿ ರಸ್ತೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಹಾಗೂ ಹುತಾತ್ಮರ 54ನೇ ವಾರ್ಷಿಕೋತ್ಸವವನ್ನು ಹಲಗೆ ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕ ವರ್ಗವು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಔಧ್ಯೋಗಿಕವಾಗಿ ಸಾಧಿಸುವ ಗುರಿ ಹೊಂದಿದೆ. ಆದರೆ ಬಂಡವಾಳ ಶಾಹಿಗಳು ಮಾತ್ರ ಕಾರ್ಮಿಕರ ಬದುಕನ್ನು ನಿಕೃಷ್ಟ ಸ್ಥಿತಿಗೆ ತಳ್ಳುತ್ತಿದ್ದಾರೆ ಎಂದು ದೂರಿದರು. ಜನಪ್ರತಿನಿಧಿಗಳು ಪ್ರಜೆಗಳ ಹಿತ ಕಾಪಾಡುವಲ್ಲಿ ವಿಫಲವಾಗುತ್ತಿದ್ದಾರೆ. ಮತ್ತು ಬಂಡವಾಳ ಶಾಹಿ ವ್ಯವಸ್ಥೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರ ಚಲಾಯಿಸುತ್ತಿರುವುದು ಶೋಚನಿಯ ಎಂದರು.

ಜಗತ್ತಿನಲ್ಲಿ ರೈತ ಬೆಳೆಯದಿದ್ದರೆ ಮತ್ತು ಕಾರ್ಮಿಕರು ಕೆಲಸ ಮಾಡದಿದ್ದರೆ ಜಗತ್ತೇ ಸ್ತಬ್ದವಾಗುತ್ತದೆ. ಆದ್ದರಿಂದ ರೈತರು ಹಾಗೂ ಕಾರ್ಮಿಕರು ನೆಮ್ಮದಿಯಿಂದ ಇದ್ದರೆ ಮಾತ್ರ ನಾಗರಿಕ ಸಮಾಜ ಸುಧಾರಿಸಲು ಸಾಧ್ಯ ಎಂದರು.

ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ಕಾರ್ಪೊರೇಟ್‌ ನೀತಿಯಿಂದ ಆಡಳಿತ ನಡೆಸುತ್ತಿದ್ದು, ಕಾರ್ಮಿಕರು ಹಾಗೂ ಮಾಲೀಕರಲ್ಲಿ ಉತ್ತಮ ಸಂಬಂಧ ಉಳಿಯುತ್ತಿಲ್ಲ ಎಂದು ಹೇಳಿದರು. 30 ಲಕ್ಷಕ್ಕೂ ಅಧಿಕ ಬಿಸಿಯೂಟದ ಕಾರ್ಯ ಕರ್ತರು, ಅಂಗನವಾಡಿ ಆಶಾ ಕಾರ್ಯಕರ್ತರು ಇಂದಿಗೂ ದಿನಗೂಲಿಯಲ್ಲೆ ದುಡಿಯುತ್ತಿದ್ದಾರೆ ಹೊರತು ಅವರಿಗೆ ಹೆಚ್ಚಿನ ಗೌರವ ಧನ ಸಿಗುತ್ತಿಲ್ಲ ಎಂದರು. ರೈತರು ಮತ್ತು ಕಾರ್ಮಿಕರು ನಿಜವಾದ ಬಹುಸಂಖ್ಯಾತರು ನಾವೆಲ್ಲರೂ ಒಗ್ಗಟ್ಟಾದರೇ ಜನಪರ ಸರ್ಕಾರ ತರುವ ಶಕ್ತಿ ನಮ್ಮಲ್ಲಿದೆ ಎಂದರು.

ಭಾರತ ಕಮ್ಯೂನಿಷ್ಟ್‌ ಪಕ್ಷದ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ಬಿಜೆಪಿ ಸರ್ಕಾರವು ಕಾರ್ಮಿಕರ ಕಾನುನೂಗಳನ್ನು ಮೊಟಕುಗೊಳಿಸುತ್ತಾ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಹೇಳಿದರು.

ಅಸಂಘಟಿತ ವರ್ಗದವರಿಗೆ ಸಿಗಬೇಕಾದ ಸವಲತ್ತುಗಳು ಹಾಗೂ ಕನಿಷ್ಠ ವೇತನ ಸಿಗದೇ ಇರುವುರಿಂದ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ರಾಜ್ಯ ವರ್ಕಿಂಗ್‌ ಕಮಿಟಿಯ ಸದಸ್ಯ ಆನಂದರಾಜ್‌, ಜಿಲ್ಲಾ ಸಮಿತಿಯ ಸಹ ಕಾರ್ಯದರ್ಶಿ ಎಂ.ಬಿ. ಶಾರದಮ್ಮ, ಸದಸ್ಯೆ ರುದ್ರಮ್ಮ ಬೆಳಲಗೆರೆ, ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಟಿ.ಎಸ್‌. ನಾಗರಾಜ್‌, ಆಂಜನೇಯ ಕಾಟನ್‌ ಮಿಲ್‌ ಎಂಪ್ಲಾಯ್ಸ್‌ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಜಯ್ಯಪ್ಪ, ಸಿಪಿಐ ತಾಲ್ಲೂಕು ಸಮಿತಿ ಕಾರ್ಯದರ್ಶಿ ಟ.ಎಚ್‌. ನಾಗರಾಜ್‌, ಮಹಮ್ಮದ್‌ ಬಾಷಾ, ಮಹ್ಮದ್‌ ರಫೀಕ್‌, ಆವರಗೆರೆ ವಾಸು ಮತ್ತು ಇತರರು ಇದ್ದರು.

error: Content is protected !!