ಮತಯಾಚನೆ ಮಾಡಿದ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್
ಹರಪನಹಳ್ಳಿ,ಏ.29- ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು, ಹರಪನಹಳ್ಳಿ ತಾಲ್ಲೂಕಿನ ಜಂಬುಲಿಂಗನಹಳ್ಳಿಯಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಅವರು, ಹರಪನಹಳ್ಳಿ ತಾಲೂಕಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ನಿಮ್ಮ ಮನೆ ಮಗ ಎಂದುಕೊಂಡು ಅವಕಾಶ ಮಾಡಿಕೊಡಿ. ಅಭಿವೃದ್ಧಿ ಮಾಡಿ ತೋರಿಸಿದ ಬಳಿಕ ಮತ್ತೆ ನಿಮ್ಮ ಬಳಿ ಮತ ಕೇಳಲು ಬರುತ್ತೇನೆ ಎಂದರು.
ಅಭಿವೃದ್ಧಿ ಕನಸು, ಹೋರಾಡುವ ಶಕ್ತಿ ಇರುವವರಿಗೆ ಮತ ನೀಡಿ. ಅಭಿವೃದ್ಧಿ ಬಗ್ಗೆ ಚಿಂತಿಸುವವರು. ಕೈಗೆ ಸಿಗುವಂತವರು ಸಂಸದರಾಗಬೇಕು. ಜನ ಸೇವಕನಾಗ ಬೇಕೆಂಬ ಉದ್ದೇಶದಿಂದ ಮತಯಾಚನೆಗೆ ಬಂದಿದ್ದೇನೆ. ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ, ಕಾಂಗ್ರೆಸ್ ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ತಂದಿದ್ದಾರೆ. ನಿಮ್ಮ ಸೇವೆ ಮಾಡಲು ಟಿಕೆಟ್ ತಂದಿದ್ದಾರೆಯೋ, ಇಲ್ಲವೋ ಅನ್ನೋದು ನೀವೇ ನಿರ್ಧರಿಸಿ. ನಿಮ್ಮ ಮುಂದೆ ಮೂರು ಅಭ್ಯರ್ಥಿಗಳಿದ್ದಾರೆ. ಮತ ಹಾಕಲು ಹೋದಾಗ ಆತ್ಮಸಾಕ್ಷಿಗನುಗುಣವಾಗಿ, ಯೋಚನೆ ಮಾಡಿ, ಸಂವಾದ ನಡೆಸಿ ನಿರ್ಧಾರ ಮಾಡಿ ಹಕ್ಕು ಚಲಾಯಿಸಿ. ಕಷ್ಟ, ಸುಖದಲ್ಲಿ ಭಾಗಿಯಾಗುವವರು, ನೋವು, ನಲಿವುಗಳಿಗೆ ಸ್ಪಂದಿಸುವವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಮಾದರಿ ದಾವಣಗೆರೆ ಜಿಲ್ಲೆಯನ್ನಾ ಗಿಸಲು ಒಂದೇ ಒಂದು ಅವಕಾಶ ಕೊಡಿ ಎಂದು ಹೇಳಿದರು. ಈ ವೇಳೆ ಜಂಬುಲಿಂಗನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ ಸೇರಿದಂತೆ ಹಲವರು ಹಾಜರಿದ್ದರು.