ಮಲೇಬೆನ್ನೂರು, ಏ.26- ಭಾನುವಳ್ಳಿ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಇದ್ದ ರಾಜವೀರ ಮದಕರಿ ನಾಯಕ ವೃತ್ತವನ್ನು ಜಿಲ್ಲಾಡಳಿತ ಏಕಾಏಕಿ ತೆರವು ಮಾಡಿರುವ ಕ್ರಮವನ್ನು ಖಂಡಿಸಿ, ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮದ ವಾಲ್ಮೀಕಿ ನಾಯಕ ಸಮಾಜ ತಿಳಿಸಿದೆ.
ಈ ವಿಚಾರವಾಗಿ ಈಗಾಗಲೇ ಡಿಸಿ, ಜಿ.ಪಂ. ಸಿಇಓ ಮತ್ತು ಪ್ರಧಾನಮಂತ್ರಿ ಕಚೇರಿ ಹಾಗೂ ಸಿಎಂ ಕಚೇರಿ ಸೇರಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ನಾಯಕ ಸಮಾಜ ಹೇಳಿದೆ.
ವಿಷಯ ತಿಳಿದ ಸಹಾಯಕ ಚುನಾವಣಾಧಿಕಾರಿ ಭಾವನಾ ಬಸವರಾಜ್, ತಹಶೀಲ್ದಾರ್ ಗುರುಬಸವರಾಜ್, ತಾ.ಪಂ. ಇಓ ರಾಮಕೃಷ್ಣಪ್ಪ, ಸಿಪಿಐ ಸುರೇಶ್ ಸಗರಿ, ಪಿಎಸ್ಐ ಪ್ರಭು ಕೆಳಗಿನಮನಿ ಅವರು ಗುರುವಾರ ಭಾನುವಳ್ಳಿ ಗ್ರಾಮಕ್ಕೆ ಆಗಮಿಸಿ, ಗ್ರಾ.ಪಂ. ಕಚೇರಿಯಲ್ಲಿ ಸಭೆ ನಡೆಸಿ, ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳಿರುವ ಜನರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಸಭೆಯಲ್ಲಿದ್ದ ವಾಲ್ಮೀಕಿ ನಾಯಕ ಸಮಾಜದವರು ನಮಗೆ ನ್ಯಾಯ ಸಿಗುವವರಿಗೂ ನಾವು ಚುನಾವಣೆಗಳಿಂದ ದೂರು ಉಳಿಯುವುದಾಗಿ ಸ್ಪಷ್ಟ ಸಂದೇಶ ನೀಡಿದ್ದಾರೆಂದು ಹೇಳಲಾಗಿದೆ.
ಯಾವುದೇ ಆದೇಶ ಇಲ್ಲದೇ, ಮದಕರಿ ನಾಯಕ ಮಹಾದ್ವಾರವನ್ನು ಒಡೆಸಿ ಹಾಕಿರುವ ಡಿಸಿ, ಎಸ್ಪಿ ಅವರು ಗ್ರಾಮಕ್ಕೆ ಆಗಮಿಸಿ, ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿದರೆ ಮಾತ್ರ ಮತದಾನ ಮಾಡುವುದಾಗಿ ನಾಯಕ ಸಮಾಜದವರು ತಿಳಿಸಿದ್ದಾರೆ.