ಯಲವಟ್ಟಿಯ ಕಾರ್ಯಕ್ರಮದಲ್ಲಿ ಯೋಗಾನಂದ ಸ್ವಾಮೀಜಿ ಅಭಿಮತ
ಮಲೇಬೆನ್ನೂರು, ಏ. 24 – ನಾವು ಮಾಡುವ ಕಾಯಕ – ಕೆಲಸದಲ್ಲಿ ಭಕ್ತಿ-ಪ್ರೀತಿ-ಪ್ರೇಮ ಇರಬೇಕು. ಆಗ ಮಾತ್ರ ಆ ಕೆಲಸದಲ್ಲಿ ನೀವು ಯಶಸ್ಸು ಕಾಣಲು ಸಾಧ್ಯ ಎಂದು ಶ್ರೀ ಯೋಗಾನಂದ ಸ್ವಾಮೀಜಿ ಹೇಳಿದರು.
ಯಲವಟ್ಟಿ ಶ್ರೀ ಗುರುಸಿದ್ಧಾಶ್ರಮದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ನಾವು ಮಾಡುವ ಕೆಲಸದಿಂದ ಫಲದ ಅಪೇಕ್ಷೆ ಇಟ್ಟುಕೊಳ್ಳಬಾರದು. ನಂಬಿಕೆಯಿಂದ ನಾವು ನಮ್ಮ ಕರ್ತವ್ಯ ಎಂದು ಕೊಂಡು ಮಾಡಿದಾಗ ಭಗವಂತನೇ ನಮಗೆ ಫಲ ನೀಡುತ್ತಾನೆ. ಭಗವಂತನಲ್ಲೂ ನಾವು ಅನುಪಮ – ಅಚಲ ಭಕ್ತಿ ಹೊಂದಿರಬೇಕು. ಏಕೆಂದರೆ ಭಗವಂತನೇ ನಮಗೆ ಬಂಧುವಾಗಿದ್ದಾನೆ. ಜೊತೆಗೆ ಗುರು-ಹಿರಿಯರ, ತಂದೆ-ತಾಯಿಗಳ ಹಾರೈಕೆ ಇದ್ದಲ್ಲಿ ನಮ್ಮ ಬದುಕು ಸಾರ್ಥಕವಾಗುತ್ತೆ ಎಂದು ಸ್ವಾಮೀಜಿ ಹೇಳಿದರು.
ಬದುಕಿನಲ್ಲಿ ಮನುಷ್ಯರನ್ನು ಅಷ್ಟೇ ಅಲ್ಲ, ಪ್ರತಿಯೊಂದು ಜೀವಿಯನ್ನೂ ಪ್ರೀತಿ-ಕರುಣೆ, ಗೌರವದಿಂದ ಕಾಣಬೇಕೆಂದು ಹೇಳಿದ ಸ್ವಾಮೀಜಿ ಅವರು, ಈ ವರ್ಷದ ಯುಗಾದಿ ನಾಡಿಗೆ ಉತ್ತಮ ಮಳೆ-ಬೆಳೆ ತರಲಿ. ಜನರಿಗೆ ಸಮೃದ್ಧಿ ಹಾಗೂ ನೆಮ್ಮದಿ ನೀಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಹನಗವಾಡಿ ಕುಮಾರ್, `ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ವಾಣಿಯಂತೆ ಕಾಯಕ ನಮ್ಮ ಬದುಕಿನ ಉಸಿರಾಗಬೇಕು.
ಕಾಯಕದಿಂದಲೇ ಜೀವನ ಮುಕ್ತಿ ಆಗಿದ್ದು, ಪ್ರತಿಯೊಬ್ಬರು ತಾವು ಮಾಡುವ ಕಾಯಕವನ್ನು ಪ್ರೀತಿಸಿ, ಗೌರವಿಸಿದಾಗ ಮಾತ್ರ ನಾವು ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದ ಕುಮಾರ್, ಇಂತಹ ಸತ್ಸಂಗ ಕಾರ್ಯಕ್ರಮಗಳು ಮನಸ್ಸಿಗೆ ಹಿತ ನೀಡುವುದರ ಜೊತೆಗೆ ಉತ್ತಮ ಬದುಕಿಗೆ ಮಾರ್ಗದರ್ಶನ ನೀಡುತ್ತವೆ ಎಂದರು.
ಪ್ರವಚನಕಾರ ಹೊಳೆಸಿರಿಗೆರೆಯ ಡಿ.ಸಿದ್ದೇಶ್ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ಕಾಯಕ ಮಾಡದ ಜೀವ ಕೈಲಾಸ ಕಾಣದು. ಹುಟ್ಟಿದ ಮೇಲೆ ಕರ್ತವ್ಯಗಳನ್ನು ಮಾಡಬೇಕು. ಆಗ ಮಾತ್ರ ಜೀವನಕ್ಕೆ ಮುಕ್ತಿ ಸಿಗುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ವಿಶ್ವಬಂಧು ಸೊಸೈಟಿ ಅಧ್ಯಕ್ಷ ಡಿ.ಯೋಮಕೇಶ್ವರಪ್ಪ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಿ.ಆಂಜನೇಯ, ಗ್ರಾಮದ ಪಿಎಸಿಎಸ್ ಅಧ್ಯಕ್ಷ ಎ.ಜಿ.ನಾಗರಾಜ್, ನಿವೃತ್ತ ಶಿಕ್ಷಕ ಜಿ.ಬಸಪ್ಪ ಮೇಷ್ಟ್ರು, ಮಾಗೋಡ ಈಶ್ವರಪ್ಪ, ಮಾಗೋಡ ಸಿದ್ದಣ್ಣ, ಕುಂದೂರು ಮಂಜಪ್ಪ, ಕುಂಬಳೂರಿನ ಎಂ.ವಾಸುದೇವಮೂರ್ತಿ, ಕೆ.ಕುಬೇರಪ್ಪ, ಗೋಪಾಲಪ್ಪ, ಸದಾಶಿವ, ಯಲವಟ್ಟಿಯ ಕೆ.ಮಂಜಪ್ಪ, ಎ.ಸುರೇಶ್, ಹುಲ್ಲುಮನಿ ರಾಜಣ್ಣ, ಹೊಸಮನಿ ಮಲ್ಲಪ್ಪ, ಜಿಗಳಿಯ ನಾಗಸನಹಳ್ಳಿ ಬಿ.ಸೋಮಶೇಖರಚಾರಿ, ಕೆ.ಎಸ್.ಮಾಲತೇಶ್, ಎ.ಕೆ.ಜಯ್ಯಪ್ಪ, ಪತ್ರಕರ್ತ ಪ್ರಕಾಶ್, ಸದಾನಂದ, ನಾಗೇಂದ್ರಪ್ಪ, ಹನಗವಾಡಿ ರುದ್ರಮನಿ, ಕೆ.ಪಾಲಾಕ್ಷಪ್ಪ, ಸಾರಥಿ ರಮೇಶ್, ಎ.ಬಿ.ಮಂಜುನಾಥ್, ನಿವೃತ್ತ ಯೋಧ ಶಿವಕುಮಾರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಜಿಗಳಿಯ ಬೆಳ್ಳೂಡಿ ರಂಗಪ್ಪ ಅವರು, ಈ ದಿನದ ದಾಸೋಹಿಗಳಾಗಿದ್ದರು. ಸಾಫ್ಟ್ವೇರ್ ಇಂಜಿನಿಯರ್ ಸಿರಿಗೆರೆಯ ವೆಂಕಟೇಶ್ಗೌಡ, ವಿದ್ಯಾರ್ಥಿ ಎಂ.ಎಸ್.ಶಿವಕುಮಾರ್ ಭಕ್ತಿ ಗೀತೆ ಹಾಡಿದರು. ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿ, ವಂದಿಸಿದರು.