ದಾವಣಗೆರೆ, ಏ. 24 – ಅಭಿವೃದ್ಧಿ ಬಗ್ಗೆ ನಮಗೆ ಬದ್ದತೆ ಇದೆ. ನಾವು ಯಾವುದೇ ಸರ್ಕಾರ ಇದ್ದರೂ ಸಹ ದಾವಣಗೆರೆ ಅಭಿವೃದ್ಧಿಗೆ ಬದ್ದರಿದ್ದೇವೆ. ನೀವೂ ಸಹ ನಮ್ಮನ್ನು ಬೆಂಬಲಿಸುವ ಮೂಲಕ ದಾವಣಗೆರೆ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.
ಪಾಲಿಕೆಯ 6ನೇ ವಾರ್ಡ್ನಲ್ಲಿ ಇಂದು ಏರ್ಪಾಡಾಗಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಾನಾಗಲೀ, ಸಚಿವ ಮಲ್ಲಿಕಾರ್ಜುನ್ ಆಗಲೀ ದಾವಣಗೆರೆ ಅಭಿವೃದ್ಧಿಗೆ ಕಂಕಣಬದ್ಧರಾಗಿ ಕೆಲಸ ಮಾಡಿದ್ದೇವೆ. ಸರ್ವ ಜನಾಂಗಕ್ಕೂ ಒಳಿತನ್ನು ಬಯಸುವ ಪಕ್ಷ ಕಾಂಗ್ರೆಸ್ ಪಕ್ಷ. ಆ ಪಕ್ಷದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ನೇಮಿಸಿದ್ದು, ಬರುವ ತಿಂಗಳು 7ರಂದು ನಡೆಯುವ ಮತದಾನದ ವೇಳೆ ಅತಿಹೆಚ್ಚು ಮತದಾನ ಮಾಡುವ ಮೂಲಕ ದೆಹಲಿಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ಪ್ರಧಾನಿ ಸೋಲಿನ ಭಯದಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ. ಈಗಾಗಲೇ ಸುಳ್ಳಿನ ಸರ್ಕಾರ ನಡೆಸಿದ ಬಿಜೆಪಿಗೆ ಸೋಲಿನ ಹತಾಶೆ ಕಾಡುತ್ತಿದ್ದು, ಇದರಿಂದಾಗಿಯೇ ಸಣ್ಣಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಸಾಧಿಕ್ ಪೈಲ್ವಾನ್, ಅನಿತಾಬಾಯಿ ಮಾಲತೇಶ್, ಮಹಾನಗರ ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ., ಮಾಜಿ ಮೇಯರ್ ಗೋಣೆಪ್ಪ, ಕುರುಬರಕೇರಿ ಮಂಜುನಾಥ್, ಎಸ್. ಮಲ್ಲಿಕಾರ್ಜುನ್, ಸುರೇಶ್ ಮತ್ತಿತರರು ಮಾತನಾಡಿ, ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆಯನ್ನು ಪ್ರತಿನಿಧಿಸಿದರೆ, ದಾವಣಗೆರೆ ಜಿಲ್ಲೆಗೆ ಆಗುವ ಉಪಯೋಗವನ್ನು ಕಾರ್ಯಕರ್ತರಿಗೆ ಮನದಟ್ಟು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ವಾರ್ಡ್ ಅಧ್ಯಕ್ಷ ಸಾಲುಮನಿ ಬಸವರಾಜ್, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ್, ಜಮ್ನಳ್ಳಿ ನಾಗರಾಜ್, ಅಜ್ಜಪ್ಪ, ಕುರುಬರಕೇರಿ ರಾಜು, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.