ಧಾರ್ಮಿಕ ಕ್ಷೇತ್ರಗಳು ಪ್ರವಾಸಿ ತಾಣ: ಡಾ. ಪ್ರಭಾ ಭರವಸೆ

ಧಾರ್ಮಿಕ ಕ್ಷೇತ್ರಗಳು ಪ್ರವಾಸಿ ತಾಣ:  ಡಾ. ಪ್ರಭಾ ಭರವಸೆ

ಹೊನ್ನಾಳಿ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಮತ ಯಾಚನೆ 

ಹೊನ್ನಾಳಿ,ಏ.23- ಎರಡನೇ ಮಂತ್ರಾಲಯ ಎಂದೇ ಪ್ರಸಿದ್ದ ಪಡೆದಿರುವ ಹೊನ್ನಾಳಿಯ ಪುಣ್ಯ ಕ್ಷೇತ್ರ ರಾಘವೇಂದ್ರ ಸ್ವಾಮಿ ಬೃಂದಾವನ ಹಾಗೂ ತೀರ್ಥರಾಮೇಶ್ವರ ಕ್ಷೇತ್ರಗಳು ಸೇರಿದಂತೆ ತಾಲ್ಲೂಕಿನ ಐತಿಹಾಸಿಕ ಕ್ಷೇತ್ರಗಳನ್ನು ಪ್ರವಾಸಿ ತಾಣಗಳನ್ನಾಗಿಸಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ತಾಲ್ಲೂಕಿನ ತೀರ್ಥರಾಮೇಶ್ವರ ಗ್ರಾಮದಿಂದ ಇಂದು ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು ಬೆಳಗುತ್ತಿ ಮಲ್ಲಿಗೇನಹಳ್ಳಿ, ರಾಮೇಶ್ವರ, ಹರಗನಹಾಳು, ಗುಡ್ಡಹಳ್ಳಿ, ಜೀನಹಳ್ಳಿ, ಕತ್ತಿಗೆ, ಕೆಂಚಿಕೊಪ್ಪ,
ಚಿನ್ನಿಕಟ್ಟೆ, ಸವಳಂಗ, ಸೋಗಿಲು ಚಟ್ನಹಳ್ಳಿ, ಫಲವನಹಳ್ಳಿ, ಮುಸ್ಸೇನಹಾಳು, ಕುಂಕುವ, ವಡೆಯರಹತ್ತೂರು, ಗಂಗನಕೋಟೆ, ಬಸವನಹಳ್ಳಿ, ಹರಳಹಳ್ಳಿ, ಅರಬಗಟ್ಟೆ, ಮಾದನಬಾವಿ, ಸೊರಟೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಹೊನ್ನಾಳಿ ತಾಲ್ಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿದ್ದು, ಇಂತಹ ಸ್ಥಳಗಳನ್ನು ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಕೇಂದ್ರದಿಂದ ಪ್ರತಿ ಕ್ಷೇತ್ರಕ್ಕೆ ವಸತಿಯುತ ಶಾಲೆಗಳು ಮಂಜೂರಾಗಲಿದ್ದು, ಅಂತಹ ವಸತಿಯುತ ಶಾಲಾ-ಕಾಲೇಜುಗಳನ್ನು ಈ ಕ್ಷೇತ್ರಕ್ಕೆ ತಂದು ಈ ಭಾಗದ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇಂದು ಹೊನ್ನಾಳಿ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ರೂ.128 ಕೋಟಿಯಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.

ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗ ಜಾರಿಗೊಳಿಸುವುದು, ನರೇಗಾ ಕೂಲಿ ಹಣವನ್ನು ರೂ. 400 ಕ್ಕೆ ಹೆಚ್ಚಿಸಲಾಗುವುದು  ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಡಿ.ಜಿ.ಶಾಂತನ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶಿವಯೋಗಿ, ನಾಗಪ್ಪ, ಡಿ.ಜಿ.ವಿಶ್ವನಾಥ್, ಮುಖಂಡರಾದ ಗದಿಗೇಶ್, ಬಿ. ಸಿದ್ದಪ್ಪ, ಉಮಾಪತಿ, ಚಂದ್ರಶೇಖರಪ್ಪ, ಮಧುಗೌಡ, ರಾಘವೇಂದ್ರ ನಾಯ್ಕ, ಜಯದೇವನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!