ಹರಪನಹಳ್ಳಿ ಹಾಗೂ ಜಗಳೂರು ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಭದ್ರಕೋಟೆಗಳು : ಸಚಿವ ಎಸ್ಸೆಸ್ಸೆಂ
ಹರಪನಹಳ್ಳಿ, ಏ.24- ಹರಪನಹಳ್ಳಿ ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಭದ್ರ ಕೋಟೆಗಳು, ಈ ಭಾಗದ 57 ಹಾಗೂ 22 ಕೆರೆಗಳಿಗೆ ನೀರು ತುಂಬಿರುವ ಯೋಜನೆಗೆ ಕೈ ಹಾಕಿದ್ದು ಕಾಂಗ್ರೆಸ್ ಪಕ್ಷ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಹರಪನಹಳ್ಳಿ ತಾಲ್ಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಅರಸೀಕೆರೆ ಹೋಬಳಿಯಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ಮತಯಾಚನೆ ನಡೆಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿರುವ ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲರ ಆಶೀರ್ವಾದ ಪಡೆಯಲು ಬಂದಿದ್ದೇವೆ. ನಾವಿಲ್ಲಿ ಬಂದು ಮತವನ್ನು ಸುಮ್ಮನೆ ಕೇಳುತ್ತಿಲ್ಲ. ನಿಮ್ಮ ನಿರೀಕ್ಷೆಗಳಿಗೂ ಮೀರಿ ಕೆಲಸ ಮಾಡಿದ್ದೇವೆ. ಹೀಗಾಗಿ ನಾವು ಮತವನ್ನು ಕೇಳುತ್ತಿದ್ದೇವೆ ಎಂದರು.
ಈ ಭಾಗಗಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ರೈತರಿಗಾಗಿ ಉತ್ತಮವಾದ ಕಾರ್ಯಗಳಾ ಬೇಕಿದೆ. ನಿರುದ್ಯೋಗ ಸಮಸ್ಯೆ ನಿವಾರಣೆ ಆಗಬೇಕಿದೆ. ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾ ಳಿಕೆ ಬಡವರ ಪರವಾಗಿವೆ. ಬಡವರ ಅಭಿವೃದ್ಧಿ ಏಳಿಗೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಕೈ ಜೋಡಿಸಿ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆ ತುಂಬಾ ಮಹತ್ವದ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಕೇಳಿಕೊಂಡರು.
ಅರಸಿಕೆರೆ, ಕಂಚಿಕೆರೆ, ತೌಡೂರು, ತೆಲಗಿ, ಹಲುವಾಗಲು, ಉಚ್ಚಂಗಿದುರ್ಗ ಮುಂತಾದ ಇನ್ನೂ ಅನೇಕ ಕಡೆಗಳಲ್ಲಿನ ಗ್ರಾಮ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಿದ್ದಾರೆ. ಎಲ್ಲಾ ಕಾರ್ಯಕರ್ತರುಗಳು ಕುಟುಂಬ ಸಮೇತರಾಗಿ ಮತಗಟ್ಟೆಗಳಿಗೆ ಆಗಮಿಸಿ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದರ ಮೂಲಕ ಜ್ಞಾನವಂತೆ, ವಿದ್ಯಾವಂತೆಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಿ, ಲೋಕಸಭೆಗೆ ಕಳುಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ದೇವೇಂದ್ರಪ್ಪ, ಹರಪನಹಳ್ಳಿಯ ಕಾಂಗ್ರೆಸ್ ಪಕ್ಷದ ಮುಖಂಡ ಅರಸೀಕೆರೆ ಕೊಟ್ರೇಶ್, ಯುವ ಮುಖಂಡ ಪಿ.ಟಿ.ಭರತ್, ಜಗಳೂರಿನ ಕೆ.ಪಿ. ಪಾಲಯ್ಯ, ಡಿ.ಬಸವರಾಜ್, ಅಣಜಿಗೆರೆ ಚಂದ್ರಪ್ಪ, ಡಾ|| ಟಿ.ಜಿ.ರವಿಕುಮಾರ್, ಕಂಬತ್ತಳ್ಳಿ ಮಂಜುನಾಥ್, ಕಲ್ಲೇಶ್ರಾಜ್ ಪಾಟೀಲ್, ರವಿಚಂದ್ರ, ಎಸ್.ಎಂ.ಜಯಪ್ರಕಾಶ್, ಉಚ್ಚಂಗಿದುರ್ಗದ ಯಶವಂತಗೌಡ ಹಾಗೂ ಇತರರು ಉಪಸ್ಥಿತರಿದ್ದರು.