ದಾವಣಗೆರೆ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಅಧಿಕ
ದಾವಣಗೆರೆ, ಏ.24- ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 17,09,244 ಮತದಾರರಿದ್ದಾರೆ. ಇದರಲ್ಲಿ ಪುರುಷರು 8,51,990, ಮಹಿಳೆಯರು 8,57,117 ಹಾಗೂ ತೃತೀಯ ಲಿಂಗ 137 ಮತದಾರರಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ ಪುರುಷರಿಗಿಂತ 5127 ಮಹಿಳಾ ಮತದಾರಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು, ಮನೆಯಲ್ಲಿಯೇ ಮತದಾನ ಪ್ರಕ್ರಿಯೆ ಏ.25 ರಿಂದ 27 ರ ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಏಜೆಂಟರೊಂದಿಗೆ ನಡೆಸಲಾದ ಸಭೆಯಲ್ಲಿ ಮಾತನಾಡಿದರು.
85 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನ ಮತದಾರರಿಗೆ ಮನೆಯಲ್ಲಿಯೇ ಮತದಾನ ಮಾಡಲು ಆಯೋಗ ಅವಕಾಶ ಕಲ್ಪಿಸಿದೆ. ಈಗಾಗಲೇ ಮತದಾರರ ಮನೆ ಬಾಗಿಲಿಗೆ ಬಿ.ಎಲ್.ಓ. ತೆರಳಿ ಇಆರ್ಓ ನೆಟ್ನಲ್ಲಿ ನೋಂದಾಯಿಸಿ ನಮೂನೆ-12ಡಿ ರಡಿ ಘೋಷಣಾ ಪತ್ರ ಪಡೆದು ಮಾರ್ಕ್ ಮಾಡಲಾಗಿದೆ.
ಕ್ಷೇತ್ರವಾರು ಮತದಾರರು
ಜಗಳೂರು 1,00,046 ಪುರುಷ, 9,8759 ಮಹಿಳಾ, 10 ಇತರೆ ಸೇರಿ 1,98,815, ಹರಪನಹಳ್ಳಿ 1,12,969 ಪುರುಷ, ,10,985 ಮಹಿಳಾ, 19 ಇತರೆ ಸೇರಿ 2,23,973, ಹರಿಹರ 1,05,510 ಪುರುಷ, 1,06,870 ಮಹಿಳೆ, 17 ಇತರೆ ಒಟ್ಟು 2,12,397,
ದಾವಣಗೆರೆ ಉತ್ತರ 1,24,485 ಪುರುಷ, 1,28,635 ಮಹಿಳೆ, 36 ಇತರೆ ಸೇರಿ 2,53,156, ದಕ್ಷಿಣ 1,09,184 ಪುರುಷ, 1,11,774 ಮಹಿಳೆ, 39 ಇತರೆ ಸೇರಿ 2,20,997, ಮಾಯಕೊಂಡ 97,759 ಪುರುಷ, 97,326 ಮಹಿಳೆ, 4 ಇತರೆ ಸೇರಿ 1,95,089, ಚನ್ನಗಿರಿ 101653 ಪುರುಷ, 1,02,208 ಮಹಿಳೆ, 9 ಇತರೆ ಸೇರಿ 203870 ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ 1,00,384 ಪುರುಷ, 1,00,560 ಮಹಿಳೆ
ಹಾಗೂ 3 ಇತರೆ ಸೇರಿ 2,00,947 ಮತದಾರರಿದ್ದಾರೆ.
ಕ್ಷೇತ್ರದಲ್ಲಿ ವಿಶೇಷಚೇತನರು 804, ಹಿರಿಯ ನಾಗರಿಕರಾದ 85 ವರ್ಷ ಮೇಲ್ಪಟ್ಟವರು 1458 ಮತದಾರರು ನೋಂದಾಯಿಸಿದ್ದು ಏ.25 ರ ಬೆಳಗ್ಗೆ 9 ಗಂಟೆಯಿಂದ ಮನೆಯಲ್ಲಿಯೇ ಮತದಾನ ಆರಂಭವಾಗಲಿ ದೆ. ಇದು ಏ.26 ಮತ್ತು ಕೊನೆಯ ಭೇಟಿಯಾಗಿ ಏ.27 ರವರೆಗೆ ನಡೆಯಲಿದೆ. ಮನೆಯಲ್ಲಿಯೇ ಮತದಾನ ಮಾಡಲು ಪ್ರತಿ ತಂಡದಲ್ಲಿ ಸೆಕ್ಟರ್ ಅಧಿಕಾರಿ, ಮತಗಟ್ಟೆ ಅಧಿಕಾರಿ, ಮತದಾನ ಅಧಿಕಾರಿ, ಮೈಕ್ರೋ ಅಬ್ಸರ್ವರ್, ವಿಡಿಯೋಗ್ರಾಫರ್, ಪೊಲೀಸ್ ಸಿಬ್ಬಂದಿ ಇದ್ದು ಒಟ್ಟು 82 ಮಾರ್ಗಗಳನ್ನು ರಚಿಸಲಾಗಿದೆ ಎಂದರು.
ಮತದಾರರ ವಿವರವನ್ನು ಅಭ್ಯರ್ಥಿಗಳಿಗೆ ನೀಡುವ ಮೂಲಕ ಮತಗಟ್ಟೆ ಮಟ್ಟದ ಏಜೆಂಟರ ಪಟ್ಟಿಯನ್ನು ನೀಡಲು ಅಭ್ಯರ್ಥಿಗಳಿಗೆ ತಿಳಿಸಿ 30 ಜನ ಅಭ್ಯರ್ಥಿ ಗಳಿರುವುದರಿಂದ ಮತದಾನ ದಿನ ಎರಡು ಬ್ಯಾಲೆಟ್ ಯುನಿಟ್ ಬಳಕೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಿಂದ ಬ್ಯಾಲೆಟ್ ಯುನಿಟ್ಗಳು ಬಂದಿದ್ದು, ಒಂದರಡು ದಿನಗಳಲ್ಲಿ ಮೊದಲ ಹಂತದ ಪರಿಶೀಲನೆ ನಡೆಸಿ ರಾಂಡಮೈಜೇಷನ್ ಮಾಡಿ ಆಯಾ ಕ್ಷೇತ್ರಗಳ ಇವಿಎಂ ಸ್ಟ್ರಾಂಗ್ ರೂಂನಲ್ಲಿ ದಾಸ್ತಾನು ಮಾಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಸೈಯ್ಯದಾ ಆಫ್ರಿನ್ ಭಾನು ಎಸ್.ಬಳ್ಳಾರಿ, ಎ.ಆರ್.ಓ. ಗಳಾದ ದುರ್ಗಶ್ರೀ. ಎನ್, ರೇಣುಕಾ, ಭಾವನಾ ಹಾಗೂ ಕಣದಲ್ಲಿನ ಅಭ್ಯರ್ಥಿಗಳು, ಏಜೆಂಟರು ಉಪಸ್ಥಿತರಿದ್ದರು.