ಯುಪಿಎಸ್‌ಇನಲ್ಲಿ ರ‍್ಯಾಂಕ್ : ಸೌಭಾಗ್ಯ ಬೀಳಗಿಮಠ ಅವರಿಗೆ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್‌ನಿಂದ ಸನ್ಮಾನ

ಯುಪಿಎಸ್‌ಇನಲ್ಲಿ ರ‍್ಯಾಂಕ್  : ಸೌಭಾಗ್ಯ ಬೀಳಗಿಮಠ ಅವರಿಗೆ  ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್‌ನಿಂದ ಸನ್ಮಾನ

ದಾವಣಗೆರೆ, ಏ. 21 – ಯುಪಿಎಸ್‌ಇ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 101ನೇ ರ‍್ಯಾಂಕ್ ಪಡೆದು, ಕರ್ನಾಟಕಕ್ಕೆ 2ನೇ ರಾಂಕ್ ಪಡೆದಿರುವ ನಗರದ ಸೌಭಾಗ್ಯ ಬೀಳಗಿಮಠ ಅವರನ್ನು ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ವತಿಯಿಂದ ಬ್ಯಾಂಕ್‌ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸೌಭಾಗ್ಯ ಅವರನ್ನು ಸನ್ಮಾನಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್, ಮಕ್ಕಳು ಓದಿನ ಜೊತೆಗೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ. ಮುಂದಿನ ಸಾಧನೆಯ ಬಗ್ಗೆ ಕನಸು ಕಾಣಬೇಕು.  ಅಂಕ ಗಳಿಕೆ ಕಡೆಗೆ ಗಮನ ನೀಡದೆ ಅಭಿರುಚಿಗೆ ತಕ್ಕಂತೆ ಬೆಳೆಯಬೇಕು. ಸೌಭಾಗ್ಯ ಬೇರೆ ಮಕ್ಕಳಿಗೂ ಸ್ಫೂರ್ತಿಯಾಗಿದ್ದು, ನಗರಕ್ಕೆ ಕೀರ್ತಿ ತಂದಿರುವುದು ಹಾಗೂ ಅತ್ಯುನ್ನತ ನಾಗರಿಕ ಸೇವೆಗೆ ಅಣಿಯಾಗಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸೌಭಾಗ್ಯ ಬೀಳಗಿಮಠ, ಪಿಯುಸಿಯಲ್ಲಿ ಶೇ. 98 ಅಂಕ ಗಳಿಸಿ, ಯುಪಿಎಸ್ಸಿ ಓದಬೇಕೆಂಬ ಹಂಬಲದಿಂದ ಪಡೆದಿದ್ದ ವೈದ್ಯಕೀಯ ಕ್ಷೇತ್ರವನ್ನು ಬಿಟ್ಟು, ಧಾರವಾಡದ ಕೃಷಿ ವಿವಿಯಲ್ಲಿ ಬಿಎಸ್ಸಿ ಕೃಷಿ ಪದವಿ ಪೂರೈಸಿ ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಅಶ್ವಿನಿ ಅವರ ಸಹಾಯದಿಂದ ಈ ಸಾಧನೆ ಸಾಧ್ಯವಾಯಿತು. ಆನ್‌ಲೈನ್‌ನಲ್ಲಿ ಮಾಕ್ ಟೆಸ್ಟ್, ಪದವಿ ಅಭ್ಯಾಸ ಮಾಡುವಾಗಲೇ ಯುಪಿಎಸ್ಸಿ ತಯಾರಿ ಹೀಗೆ ಪ್ರತಿದಿನ 7 ರಿಂದ 8 ಗಂಟೆ ಅಭ್ಯಾಸದಿಂದ ತಯಾರಿ ಮುಂದುವರಿಸಿದ್ದೆ ಎಂದು ಸೌಭಾಗ್ಯ ತಮ್ಮ ಅನುಭವ ಹಂಚಿಕೊಂಡರು. 

ಸೌಭಾಗ್ಯ ತಂದೆ ಶರಣಯ್ಯ ಸ್ವಾಮಿ ಮಾತನಾಡಿ, ತಮ್ಮ ಮಗಳು ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಸವಾಲು ಗೆದ್ದಿರುವುದು ನಮ್ಮ ಸೌಭಾಗ್ಯ. ಯಾವುದೇ ಕೋಚಿಂಗ್ ಇಲ್ಲದೇ ಸಾಧನೆ ಮಾಡಿರುವುದು ತಮಗೆ ಹೆಮ್ಮೆಯ ವಿಷಯ ಎಂದು  ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ ಪರಶುರಾಮಪ್ಪ, ವ್ಯವಸ್ಥಾಪನಾ ಮಂಡಲಿಯ ಅಧ್ಯಕ್ಷರು ಮತ್ತು ಹಾಲಿ ನಿರ್ದೇಶಕ ಎ.ಹೆಚ್. ಕುಬೇರಪ್ಪ, ನಿರ್ದೇಶಕರುಗಳಾದ  ಕಿರುವಾಡಿ ವಿ. ಸೋಮಶೇಖರ್‌,  ಶಂಕರ್ ಖಟಾವ್‌ಕರ್, ಎಸ್.ಕೆ. ಪ್ರಭು ಪ್ರಸಾದ್,  ಕೆ.ಎಂ. ಜ್ಯೋತಿ ಪ್ರಕಾಶ್, ಪಿ.ಹೆಚ್. ವೆಂಕಪ್ಪ, ಬಿ. ನಾಗೇಂದ್ರಚಾರಿ, ಬಿ. ಚಿದಾನಂದಪ್ಪ, ಎ. ಕೊಟ್ರೇಶ್, ಶ್ರೀಮತಿ ಉಮಾ ವಾಗೀಶ್,  ವಿಶಾಲ್‌ ಕುಮಾರ್ ಆರ್. ಸಂಘವಿ, ಶ್ರೀಮತಿ ಅನಿತಾ ಕೋಗುಂಡಿ ಪ್ರಕಾಶ್, ಶ್ರೀಮತಿ ಅನೂಪ ಡಾ|| ವೀರೇಂದ್ರಸ್ವಾಮಿ, ವೃತ್ತಿಪರ ನಿರ್ದೇಶಕರಾದ  ಆರ್.ವಿ. ಶಿರಸಾಲಿಮಠ,  ಕಿರಣ್ ಶೆಟ್ಟಿ ಮತ್ತು ವ್ಯವಸ್ಥಾಪನಾ ಮಂಡಲಿಯ ಸದಸ್ಯರಾದ ಕೆ.ಎಂ. ಬಸವರಾಜ್, ಶ್ರೀಮತಿ ಜಿ.ಸಿ. ವಸುಂಧರ, ಮತ್ತು ಶ್ರೀಮತಿ ಶೈಲಾ ಹಾಲಸ್ವಾಮಿ ಕಂಬಳಿ ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಎನ್. ತುಳಸಿನಾಥ್, ಉಪ ಪ್ರಧಾನ ವ್ಯವಸ್ಥಾಪಕರಾದ  ಕೆ.ಎಂ. ರುದ್ರಮುನಿ ಮತ್ತು ಕೆ.ಎಂ. ನಟರಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ವೇಳೆ ಸೌಭಾಗ್ಯ  ತಾಯಿ ಶರಣಮ್ಮ  ದಂಪತಿ ಹಾಜರಿದ್ದರು.

error: Content is protected !!