ಸಾಮೂಹಿಕ ವಿವಾಹ, ಅನ್ನ ಸಂತರ್ಪಣೆ
ಮಲೇಬೆನ್ನೂರು, ಏ. 17- ಸುಕ್ಷೇತ್ರ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸ ವವು ರಾಮನವಮಿ ಅಂಗವಾಗಿ ಬುಧವಾರ ಮಧ್ಯಾಹ್ನ ಸಂಪ್ರದಾಯದಂತೆ ಜರುಗಿತು.
ದೇವಸ್ಥಾನದಿಂದ ಶ್ರೀ ಆಂಜನೇಯ ಸ್ವಾಮಿ, ಗ್ರಾಮದೇವತೆ ದುರ್ಗಾಂಬ, ಗಲ್ಲೇ ದುರ್ಗವ್ವ, ದೊಣ್ಣೆ ಕೆಂಚಮ್ಮ, ಭೂತಪ್ಪ ದೇವರುಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ ನಂತರ ರಥಕ್ಕೆ ಅನ್ನಬಾನ ಪೂಜೆ ಸಲ್ಲಿಸಿ, ರಥದ ಚಕ್ರಗಳಿಗೆ ತೆಂಗಿನ ಕಾಯಿಗಳನ್ನು ಹೊಡೆದು ರಥವನ್ನು ಎಳೆದು ಶಾಸ್ತ್ರ ಮಾಡಲಾಯಿತು.
ವಿಪ್ರ ಸಮಾಜ ಮತ್ತು ವಾಸವಿ ಸಮಾಜದವರು ಸೇರಿದಂತೆ ಬೇರೆ ಬೇರೆ ಊರುಗಳಿಂದ ಬಂದಿದ್ದ ಭಕ್ತರು ಹಾಗೂ ಗ್ರಾಮಸ್ಥರು ಹಾಜರಿದ್ದು, ಬ್ರಹ್ಮ ರಥೋತ್ಸವ ನಡೆಸಿಕೊಟ್ಟರು.
ವಾಸವಿ ಸಂಘದಿಂದ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು. ರಥೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 10 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನವ ವಧು-ವರರಿಗೆ ತಾಳಿ, ಬಟ್ಟೆಗಳನ್ನು ದೇವಸ್ಥಾನದಿಂದ ವಿತರಿಸಲಾಯಿತು.
ಬುಧವಾರ ತಡರಾತ್ರಿ (ಗುರುವಾರ ಬೆಳಗಿನ ಜಾವ) ಶ್ರೀ ಸ್ವಾಮಿಯ ಮಹಾ ರಥೋತ್ಸವವು ವೈಭವದೊಂದಿಗೆ ಜರುಗಲಿದೆ.
ನಾಳೆ ಗುರುವಾರ ಬೆಳಿಗ್ಗೆ ಭಕ್ತಾದಿಗಳಿಂದ ಶ್ರೀ ಸ್ವಾಮಿಯ ಸೇವೆ, ಮಧ್ಯಾಹ್ನ ಶ್ರೀ ಸ್ವಾಮಿಯು ಬೇಟೆಯಾಡಲು ಹೊರಡುವುದು. ಸಂಜೆ ಓಕುಳಿ, ರಾತ್ರಿ ಡೊಳ್ಳು, ಮೇಳ ಮತ್ತು ತೈಲಾದಿಗಳಿಂದ ಧೂಪ ಹಾಕಲಾಗುವುದು.
ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲದವರೆಗೂ ಶ್ರೀ ಆಂಜನೇಯ ಸ್ವಾಮಿಯು ಶ್ರೀ ದುರ್ಗಾಂಬ, ಶ್ರೀ ಮಾತಂಗ್ಯಮ್ಮ, ಜಿ.ಟಿ. ಕಟ್ಟೆ ಹಾಗೂ ಕೊಮಾರನಹಳ್ಳಿ ಗ್ರಾಮಗಳ ಶ್ರೀ ಬೀರ ದೇವರು ಗಳೊಂದಿಗೆ ಗ್ರಾಮದ ಎಲ್ಲಾ ಮನೆಗಳಿಗೆ ಸಂದರ್ಶನ ನೀಡುವುದು. ಸಂಜೆ ಭೂತ ಸೇವೆಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ.