ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ

ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ

ದಾವಣಗೆರೆ, ಏ.15- ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮವು ಏಪ್ರಿಲ್ 1 ಆರಂಭವಾಗಿದ್ದು, 30 ರವರೆಗೆ ನಡೆಯಲಿದೆ.

ಎಲ್ಲಾ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ಧ ಲಸಿಕೆ ಹಾಕಿಸಬೇಕು. ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ಹಾಲಿನ ಇಳುವರಿ ಕಾಪಾಡಲು ಅನುಕೂಲವಾಗುತ್ತದೆ.

ಜಾನುವಾರುಗಳನ್ನು ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ  ಮೇಯಿಸಲು ಬಿಡಬೇಕು, ದಿನಕ್ಕೆ 2 ರಿಂದ 3 ಸಾಲ ಶುದ್ದವಾದ ನೀರನ್ನು ಕುಡಿಸಬೇಕು. ಮಧ್ಯಾಹ್ನದ ಸಮಯದಲ್ಲಿ ಜಾನುವಾರುಗಳನ್ನು ಕೊಟ್ಟಿಗೆ ಯಲ್ಲಿ ಅಥವಾ ಗಿಡದ ನೆರಳಿನಲ್ಲಿ ಕಟ್ಟಬೇಕು. ಜಾನುವಾರು ಗಳಿಗೆ ದಿನದಲ್ಲಿ 1 ರಿಂದ 2 ಸಾರಿ ಮೈ ತೊಳೆಯಬೇಕು ಹಾಗೂ ಮಿಶ್ರ ತಳಿ ರಾಸು, ಎಮ್ಮೆಗಳಲ್ಲಿ ದೇಹದ ಉಷ್ಣತೆ ಕಾಪಾಡಲು ಗೋಣಿಚೀಲಗಳನ್ನು ನೀರಲ್ಲಿ ತೋಯಿಸಿ ಮೈಮೇಲೆ ಹಾಕಬೇಕು. ದನದ ಕೊಟ್ಟಿಗೆಯನ್ನು ತಂಪಾಗಿ ಇಡಲು ಕೊಟ್ಟಿಗೆಯ ಮೇಲೆ ತೆಂಗಿನ ಗರಿ, ಹುಲ್ಲನ್ನು ಹಾಕಿ, ಕಿಟಕಿಗಳಿಗೆ ಗೋಣಿಚೀಲಗಳನ್ನು ಕಟ್ಟಿ ನೀರನ್ನು ಸಿಂಪಡಿಸುತ್ತಿರಬೇಕು. ಜಮೀನು ಉಳುಮೆ ಮಾಡಲು ಎತ್ತುಗಳನ್ನು ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಮಾತ್ರ ಕೆಲಸಕ್ಕೆ ಉಪಯೋಗಿಸಬೇಕು.

ಕುರಿ ಮತ್ತು ಆಡುಗಳನ್ನು ಸಹ ತಂಪಾದ ಸಮಯದಲ್ಲಿ ಮೇಯಿಸಿ, ಮಧ್ಯಾಹ್ನದಲ್ಲಿ ಗಿಡಗಳ ನೆರಳಿನಲ್ಲಿ ನಿಲ್ಲಿಸಬೇಕು. ವಲಸೆ ಕುರಿಗಳು ದೂರದ ಸ್ಥಳಗಳಿಗೆ ಹೋಗುವುದಿದ್ದರೆ, ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಹೊಡೆದುಕೊಂಡು ಹೋಗಬೇಕು. ಕರು, ಕುರಿ, ಮೇಕೆ ಮರಿಗಳಿಗೆ ಸರಿಯಾದ ಪ್ರಮಾಣದಲ್ಲಿ ಹಾಲನ್ನು ಕುಡಿಸಬೇಕು ಹಾಗೂ ನೀರನ್ನು ಸಹ 2 ರಿಂದ 3 ಸಾರಿ ಕುಡಿಸಬೇಕು. 

ಹೈನು ರಾಸುಗಳಿಗೆ ಸಾಧ್ಯವಾದಷ್ಟು ಪೌಷ್ಠಿಕ ಆಹಾರ ಹಾಗೂ ಲಭ್ಯವಿರುವ ಹಸಿರು ಮೇವನ್ನು ಕೊಡಬೇಕು. ಪೌಷ್ಠಿಕ ಆಹಾರ ಅಥವಾ ಕುಡಿಯುವ ನೀರಿನಲ್ಲಿ ಲವಣ ಮಿಶ್ರಣ, ಉಪ್ಪು ಹಾಗೂ ಬೆಲ್ಲವನ್ನು ನಿಗದಿತ ಪ್ರಮಾಣದಲ್ಲಿ ನೀಡಬೇಕು. ಜಾನುವಾರುಗಳಿಗೆ ಮುಂಜಾಗ್ರತೆ ಯಾಗಿ ಇಲಾಖೆಯಿಂದ ಉಚಿತವಾಗಿ ನೀಡುವ ಸಾಂಕ್ರಾಮಿಕ ರೋಗಗಳ ಲಸಿಕೆಗಳನ್ನು ಕಾಲಕಾಲಕ್ಕೆ ನಿಗದಿತ ಸಮಯದಲ್ಲಿ ಹಾಕಿಸಬೇಕು. ಜಂತುನಾಶಕ ಔಷಧಿಯನ್ನು ವರ್ಷಕ್ಕೆ 2 ರಿಂದ 3 ಸಾರಿ ಕುಡಿಸಬೇಕು. ಯಾವುದೇ ಸಮಯದಲ್ಲಿ ಕಾಯಿಲೆಯಿಂದ ಬಳಲುವ ಚಾನುವಾರುಗಳನ್ನು ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಚಿಕಿತ್ಸೆ ಕೊಡಿಸಬೇಕು.

ನಿರ್ಜಲೀಕರಣಗೊಂಡ ಜಾನುವಾರುಗಳಿಗೆ ಉಪ್ಪು, ಅಡುಗೆ ಸೋಡಾ, ಬೆಲ್ಲ ಹಾಗೂ ಲಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಮಿಶ್ರಣ ಮಾಡಿ, ದಿನದಲ್ಲಿ 3 ರಿಂದ 4 ಸಾರಿ ಕುಡಿಸಬೇಕು. ಕೊಟ್ಟಿಗೆಯ ಸುತ್ತಮುತ್ತ ಮತ್ತು ತೋಟ, ಹೊಲದ ಬದುವುಗಳಲ್ಲಿ ಮೇವಿನ ಮರಗಳನ್ನು ಬೆಳೆಸುವುದರಿಂದ ಜಾನುವಾರುಗಳಿಗೆ ತಂಪಾದ ನೆರಳು ಹಾಗೂ ಪೌಷ್ಠಿಕ ಆಹಾರವಾಗಿ ಹಸಿರು ಸೊಪ್ಪು ತಿನ್ನಿಸಲು ಅನುಕೂಲವಾಗುತ್ತದೆ. ರೈತರು ತಮ್ಮ ಜಮೀನಿನಲ್ಲಿರುವ ಮೇವನ್ನು ಯಾವುದೇ ಕಾರಣಕ್ಕೂ ಸುಟ್ಟು ಹಾಕದೇ ಬಣವೆ ಹಾಕಿ ಅಥವಾ ಸುರುಳಿ ಸುತ್ತಿಟ್ಟುಕೊಂಡು ಮೇವನ್ನು ಸಂಗ್ರಹಿಸಬೇಕು. ಇದರಿಂದ ಭೂಮಿಯ ಫಲವತ್ತತೆ ಹಾಳಾಗದಂತೆ ತಡೆಯಬಹುದು. ಜೊತೆಗೆ ವಾಯುಮಾಲಿನ್ಯ ನಿಯಂತ್ರಣ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯನ್ನು ನೀಗಿಸಬಹುದು. 

ಬೇಸಿಗೆಯಲ್ಲಿ ಆಕಾಲಿನ ಮುಂಗಾರು ಮಳೆ ಜೊತೆಗೆ ಸಿಡಿಲಾಘಾತ ಆಗುವ ಸಂಭವ ಹೆಚ್ಚಾಗಿರುವುದರಿಂದ ಜಾನುವಾರುಗಳ ಸಾವು-ನೋವು ತಪ್ಪಿಸಲು ರೈತರು ತಮ್ಮ ವೈಯಕ್ತಿಕ ಸುರಕ್ಷತೆ ಜೊತೆಗೆ ಜಾನುವಾರುಗಳನ್ನು ಯಾವುದೇ ಕಾರಣಕ್ಕೂ ಗಿಡ, ಮರಗಳ ಕೆಳಗೆ ನಿಲ್ಲಿಸಬಾರದು. ಎತ್ತರ ಪ್ರದೇಶದಲ್ಲಿ (ಗುಡ್ಡದಲ್ಲಿ) ಚಾನುವಾರು ಗಳನ್ನು ಮೇಯಿಸುತ್ತಿದ್ದರೆ ತಕ್ಷಣ ತಗ್ಗು ಪ್ರದೇಶಕ್ಕೆ ಸ್ಥಳಾಂತರಿಸಬೇಕು. ತಂತಿ ಬೇಲಿ, ವಿದ್ಯುತ್ ಕಂಬ, ಮೊಬೈಲ್, ಎಲೆಕ್ಟ್ರಿಕಲ್ ಟವರ್ ಮುಂತಾದವುಗಳ ಹತ್ತಿರ ಇರಬಾರದು. ಆದಾಗಿಯೂ ನೈಸರ್ಗಿಕ ವಿಕೋಪದಿಂದ ಜಾನುವಾರುಗಳು ಮರಣ ಹೊಂದಿದಲ್ಲಿ ತಕ್ಷಣವೇ ಕಂದಾಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್ ತಿಳಿಸಿದ್ದಾರೆ. 

error: Content is protected !!