ಹೊನ್ನಾಳಿಯಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಾಯತ್ರಿ ಸಿದ್ದೇಶ್ವರ
ಹೊನ್ನಾಳಿ, ಏ.14- ನನಗೆ ಚೆನ್ನಾಗಿ ಅಡುಗೆ ಮಾಡಲು ಬರುತ್ತೆ, ಮಾತನಾಡುವುದರ ಜೊತೆಗೆ ಮನೆತನ ನಡೆಸುವುದು ಸೇರಿದಂತೆ, ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ದೇಶ ಸೇವೆ ಮಾಡುವುದೂ ಗೊತ್ತು ಎಂದು ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹೇಳಿದರು.
ಇಲ್ಲಿನ ಟಿ.ಬಿ. ವೃತ್ತದ ವಾಣಿ ಹೊಂಡಾ ಶೋರೂಂ ಬಳಿ ನೂತನ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕರ್ತರೇ ಪಕ್ಷದ ಆಸ್ತಿ, ಪ್ರತಿ ಬೂತ್ ಮಟ್ಟದಲ್ಲಿ ಮತದಾರರ ಮನವೊಲಿಸಿ ಮತ ಹಾಕಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ತಾಲ್ಲೂಕಿನಲ್ಲಿ ನಾವು, ರೇಣುಕಾಚಾರ್ಯ ಸೇರಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜಿಲ್ಲಾ ಮುಖಂಡರ ಉಪಸ್ಥಿತಿಯಲ್ಲಿ ಇದೇ ದಿನಾಂಕ 19ರಂದು ನಾಮಪತ್ರ ಸಲ್ಲಿಸಲಿದ್ದು, ಅವಳಿ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಆಗಮಿಸಿ ಬೆಂಬಲಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ, ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗುವುದು ಅಷ್ಟೇ ಸತ್ಯವಾಗಿದ್ದು, 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಮೋದಿಯವರ ಕೈ ಬಲಪಡಿಸಲು ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಗೆಲ್ಲಿಸುವುದರ ಜೊತೆಗೆ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕನಸು ನನಸಾಗಿಸಬೇಕಿದೆ ಎಂದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, ಹೊನ್ನಾಳಿ ತಾಲ್ಲೂಕಿನ ಮತದಾರರು ಹಾಗೂ ಜನತೆ ಎಷ್ಟು ಬುದ್ದಿವಂತರೆಂದು ಈ ಹಿಂದೆ ನಡೆದಿರುವ ಚುನಾವಣೆಗಳಲ್ಲಿ ತೋರಿಸಿದ್ದೀರಿ. ಅದರಂತೆ ಮೇ 7ರ ಚುನಾವಣೆಯಲ್ಲೂ ಹಿಂದಿಗಿಂತಲೂ ಹೆಚ್ಚು ಮತಗಳು ಬರುವಂತೆ ಅಭ್ಯರ್ಥಿ ಗೆಲುವಿಗೆ ಮುಂದಾಗಬೇಕೆಂದರು.
ರಾಜ್ಯ ಹಿಂದುಳಿದ ವರ್ಗಗಳ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ಕುಬೇಂದ್ರಪ್ಪ ಮಾತನಾಡಿ, ಉಕ್ರೇನ್-ರಷ್ಯಾ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ 22 ಸಾವಿರ ಭಾರತೀಯರನ್ನು ರಕ್ಷಿಸಿ, ದೇಶಕ್ಕೆ ಸುರಕ್ಷಿತವಾಗಿ ಕರೆತಂದ ಮೋದಿಗೆ ನಾವೆಲ್ಲರೂ ಬೆಂಬಲಿಸೋಣ ಎಂದರು.
ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಜೆ.ಕೆ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಮುಖಂಡರಾದ ಧನಂಜಯ ಕಡ್ಲೆಬಾಳು, ಅನಿಲ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ಜಯಮ್ಮ, ಕೊಳೇನಹಳ್ಳಿ ಸತೀಶ್, ನಾಗರಾಜ್, ಅಣ್ಣೇಶ್, ನೆಲಹೊನ್ನೆ ಮಂಜುನಾಥ್, ಧರ್ಮಪ್ಪ, ಶಿವಾನಂದ ಇತರರು ಉಪಸ್ಥಿತರಿದ್ದರು.