ದಾವಣಗೆರೆ, ಏ.14 – ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಸಮಾನತೆ, ಭ್ರಾತೃತ್ವದ ಪರಿಕಲ್ಪನೆಗಳು ಹಾಗೂ ಸಮ ಸಮಾಜದ ದೃಷ್ಟಿಕೋನಗಳಿವೆ. ಅಂತಹ ಆದರ್ಶ ಪುರುಷ ಹಾಕಿಕೊಟ್ಟಂತಹ ಸಿದ್ಧಾಂತಗಳನ್ನು ಪಾಲಿಸಿ ಅಸ್ಪೃಶ್ಯತೆ ವಿರೋಧಿಗಳಾಗಿ, ಸಮ ಸಮಾಜದ ನಿರ್ಮಾಣ ಮಾಡಲು ನಾವು ಕೂಡ ಕಾರಣೀಭೂತರಾಗಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ದಾವಣಗೆರೆ ಇವರ ಸಂಯುಕ್ತಾಶ್ರ ಯದಲ್ಲಿ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 133 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಚಿಕ್ಕ ವಯಸ್ಸಿನಿಂದಲೇ ಸಾಕಷ್ಟು ಕಷ್ಟ, ಅಸ್ಪೃಶ್ಯತೆ ಎದುರಿಸಿದ್ದಾರೆ. ಎಂತಹ ಕಷ್ಟಗಳೇ ಬಂದರೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸಮಾಜದಲ್ಲಿರುವ ಸಂಘರ್ಷಗಳನ್ನು ಸಮರ್ಥವಾಗಿ ಎದುರಿಸಿ ಭಾರತ ದೇಶದ ರತ್ನವಾಗಿ ಅವರು ಬೆಳೆದರು ಎಂದು ಹೇಳಿದರು.
ಅವರು ನ್ಯೂಯಾರ್ಕ್ ಕೊಲಂಬಿಯಾ ವಿಶ್ವವಿದ್ಯಾನಿ ಲಯದಲ್ಲಿ ಸಂಶೋಧನಾ ಪದವಿ ಪಡೆದು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪದವಿ ಪಡೆದರು. ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡಿ ದಂತಹ ವಿದ್ಯಾರ್ಥಿಗಳಲ್ಲಿ ಇಡೀ ವಿಶ್ವದಲ್ಲಿ ಹೆಚ್ಚು ಪ್ರಭಾವ ವುಂಟು ಮಾಡಿದವರಲ್ಲಿ ಅಂಬೇಡ್ಕರ್ ಪ್ರಥಮ ಎಂದರು.
ಡಾ. ಬಿ.ಆರ್ ಅಂಬೇಡ್ಕರ್ ರವರು ಹಾಕಿಕೊಟ್ಟಂತಹ ಸಂವಿಧಾನದಿಂದ ಭಾರತ ವಿಶ್ವದಲ್ಲಿಯೇ ಒಂದು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಯಶಸ್ಸು ಕಂಡಿದೆ. ಭಾರತ ಪ್ರಜಾಪ್ರಭುತ್ವವನ್ನು ಬೇರೆ ದೇಶಗಳಿಗೂ ಕಲಿಸುತ್ತಿದೆ. ಮೇ 7ರಂದು ಲೋಕಸಭಾ ಚುನಾವಣೆ ಮತದಾನ ನಡೆಯುತ್ತಿದೆ. ಅಂಬೇಡ್ಕರ್ ಅವರ ಪರಿಶ್ರಮಕ್ಕೆ ಸಾಕಾರವಾಗಿ, 18 ವರ್ಷ ತುಂಬಿದ ಪ್ರತಿಯೊಬ್ಬರು ಅಂದು ಮತಗಟ್ಟೆಗೆ ಬಂದು ಮುಕ್ತ, ನ್ಯಾಯಸಮ್ಮತವಾಗಿ, ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಸಾರ್ಥಕತೆ ಮೆರೆಯೋಣ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಅಂಬೇ ಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ, ಸಂವಿಧಾನ ಶಿಲ್ಪಿಯಾಗಿ ನಮಗೆಲ್ಲರಿಗೂ ಅಧಿಕಾರ, ಮೂಲಭೂತ ಹಕ್ಕುಗಳು, ಸಾಂವಿಧಾನಿಕ ಹಕ್ಕುಗಳು ಹಾಗೂ ಕಾನೂನಾತ್ಮಕ ಹಕ್ಕುಗಳನ್ನು ಕೊಟ್ಟಿದ್ದಾರೆ ಎಂದರು.
ಸಮ ಸಮಾಜದ ನಿರ್ಮಾಣಕ್ಕಾಗಿ ಅವರ ಕೊಡುಗೆ ಅಪಾರವಾಗಿದೆ. ಹಾಗಾಗಿ ಅವರು ಕೊಟ್ಟಿರುವಂತಹ ಎಲ್ಲಾ ತತ್ವಗಳು, ಆದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿ.ರಂಗಸ್ವಾಮಿ, ಅಂಬೇಡ್ಕರ್ ಅವರ ಜೀವನ ಕೆಂಡದ ಮೇಲಿನ ನಡಿಗೆಯಾಗಿತ್ತು. ಕಷ್ಟ ಹಾಗೂ ಹೋರಾಟದ ಜೀವನ ನಡೆಸುತ್ತಲೇ ಅವರು ಭಾರತದ ಕೋಟ್ಯಂತರ ಜನರಿಗೆ ಬೆಳಕಾ ಗುವ ಸಂವಿಧಾನ ನೀಡಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಬಾನು ಎಸ್. ಬಳ್ಳಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್, ತಹಶೀಲ್ದಾರ್ ಸಿ.ಅಶ್ವತ್ಥ್, ಯೋಜನಾ ನಿರ್ದೇಶಕ ಮಹಾಂತೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.