ಹರಿಹರ,ಏ.11- ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಗುರುವಾರ ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಿದರು.
ಅಹ್ಲೆ ಸುನ್ನತ್ ಪಂಗಡದವರು ಅಂಜುಮನ್ ಶಾಲೆ ಸಮೀಪದ ಈದ್ಗಾ ಮೈದಾನದಲ್ಲಿ ಹಾಗೂ ಅಹ್ಲೆ ಹದೀಸ್ ಪಂಗಡದವರು ಜೈಭೀಮ ನಗರ ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಹಿಳೆಯರೂ ಅಪಾರ ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಪ್ರಾರ್ಥನೆ ನಂತರ ಪ್ರವಚನ ನೀಡಿದ ಧರ್ಮ ಗುರುಗಳು, ಒಂದು ಮಾಸದ ಕಠಿಣ ಉಪವಾಸಗಳ ನಂತರ ಈದ್ ಉಲ್ ಫಿತ್ರ್ ಹಬ್ಬ ಬಂದಿದೆ. ಕೇವಲ ಉಪವಾಸ ಇದ್ದರೆ ಸಾಲದು ಈ ಮಾಸದಲ್ಲಿ ಸ್ಥಿತಿವಂತರು ತಮ್ಮ ಆಸ್ತಿ, ಅಂತಸ್ತಿಗನುಸಾರವಾಗಿ ದಾನ, ಧರ್ಮಗಳನ್ನು ಮಾಡಬೇಕಿದೆ ಎಂದರು.
ಉಪವಾಸಗಳ ಮೂಲಕ ಇನ್ನೊಬ್ಬರ ಹಸಿವು, ಬಾಯಾರಿಕೆ ನೀಗಿಸಬೇಕು. ದುರ್ಬ ಲರ ಬದುಕನ್ನು ಆಲೋಚನೆಗೆ ಹಚ್ಚಬೇಕು. ಇನ್ನೊಬ್ಬನ ಹಸಿವು, ದಾಹದ ಅನುಭವವನ್ನು ಪಡೆದು ಅವರಿಗಾಗಿ ಮಿಡಿಯುವ ಗುಣವನ್ನು ಮೈಗೂಡಿಸಿಕೊಳ್ಳುವುದು ದೇವನಿಗೆ ಇಷ್ಟ ಎಂಬ ಸೊಗಸಾದ ಮತ್ತು ಮಾನವೀಯತೆಯ ಜೀವನ ಪಾಠವನ್ನು ಈ ಹಬ್ಬ ಪ್ರಸ್ತುತಪಡಿಸುತ್ತದೆ ಎಂದರು.
ಈ ಹಬ್ಬಕ್ಕೆ ಇನ್ನೊಂದು ಮುಖವಿದ್ದು ಅದುವೆ ಅಧ್ಯಾತ್ಮದ್ದು. ಅದು ಹಸಿವನ್ನು ಅಧ್ಯಾತ್ಮದ ಜೊತೆಗೆ ಜೋಡಿಸುತ್ತದೆ. ಮನದ ಕೊಳೆಯನ್ನು ನೀಗಿಸುವ ಪವಿತ್ರ ತಿಂಗಳು. ಉಪವಾಸ, ಅಲ್ಲಾಹನ ಆರಾಧನೆ, ಕುರ್ಆನ್ ಪಾರಾಯಣ, ಪ್ರಾರ್ಥನೆ, ಜಾಗರಣೆ ಯಲ್ಲಿ ಕಳೆಯುವ ಮಾಸವಾಗಿದೆ ಎಂದರು.
ಮಳೆಗಾಗಿ ಕೋರಿಕೆ: ಮಳೆ ಕೊರತೆ, ಬಿರು ಬಿಸಲಿನಿಂದ ನಾಡಿನ ರೈತರು, ಜನಸಾಮಾನ್ಯರು ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಉತ್ತಮ ಮಳೆ, ಬೆಳೆಗಾಗಿ ಪ್ರವಚನಕಾರರು ತಮ್ಮ ಪ್ರಾರ್ಥನೆಯಲ್ಲಿ ವಿಶೇಷವಾಗಿ ಕೋರಿಕೊಂಡರು.
ಅಹ್ಲೆ ಸುನ್ನತ್ ಈದ್ಗಾ ಮೈದಾನದಲ್ಲಿ ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಸಾಬ್ ಬರ್ಕಾತಿ, ಅಹ್ಲೆ ಹದೀಸ್ ಈದ್ಗಾ ಮೈದಾನದಲ್ಲಿ ಮೌಲಾನಾ ಬರ್ಕತ್ವುಲ್ಲಾ ಜಾಮಯಿ ಪ್ರವಚನ ನೀಡಿದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಸೈಯದ್ ಏಜಾಜ್, ಉಪಾಧ್ಯಕ್ಷ ಫಾರೂಖ್ ಎಂ. (ಎಂಎಂಡಿ), ಕಾರ್ಯದರ್ಶಿ ಸೈಯದ್ ಆಸಿಫ್ ಅಹ್ಮದ್ ಜುನೈದಿ, ಖಜಾಂಚಿ ಫಯಾಜ್ ಅಹ್ಮದ್, ನಿರ್ದೇಶಕರಾದ ಆರ್.ಸಿ.ಜಾವೀದ್, ಫಕ್ರುಲ್ಲಾ ಖಾನ್ ಎಚ್., ಸೈಯದ್ ಅಶ್ಫಾಖ್, ನಾಸೀರ್ ಸಾಬ್ ಪೈಲ್ವಾನ್, ಮೊಹ್ಮದ್ ಸಿಗ್ಬತ್ಉಲ್ಲಾ ಬಿ., ಸೈಯದ್ ಸನಾವುಲ್ಲಾ ಎಂ.ಆರ್., ಮುಜಾಮ್ಮಿಲ್ ಎಂ.ಆರ್. (ಬಿಲ್ಲು), ರೋಷನ್ ಜಮೀರ್ ಟಿ., ನೂರ್ ಉಲ್ಲಾ ಎಚ್., ಸೈಯದ್ ರಹಮಾನ್, ಸೈಯದ್ ಬಷೀರ್ ಬಿ., ಸಾಧೀಖ್ ಉಲ್ಲಾ ಎಸ್.ಎಂ., ಮೊಹ್ಮದ್ ಅಲಿ ಎನಪೋಯ, ಅಫ್ರೋಜ್ ಖಾನ್, ಹಾಜಿ ಅಲಿ ಖಾನ್, ಸರ್ಫರಾಜ್ ಅಹ್ಮದ್ ಕೆ., ಗೌಸ್ ಪೀರ್ ಇದ್ದರು.