ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ
ಹರಿಹರ, ಏ.10 – ಕರ್ನಾಟಕ ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ಬಿಜೆಪಿಯನ್ನು ಕಟ್ಟುವಲ್ಲಿ ಪಂಚಮಸಾಲಿ ಸಮಾಜದ ಜನರ ಪಾತ್ರ ಬಹುಮುಖ್ಯ ವಾಗಿದೆ. ಆದರೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರಕ್ಕೆ ಮಾತ್ರ ಟಿಕೆಟ್ ನೀಡಿರುವುದು ಅಸಮಾಧಾನ ತರಿಸಿದೆ ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ನಗರದ ಪಂಚಮಸಾಲಿ ಗುರುಪೀಠದ ಆವರಣ ದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀಗಳು, ರಾಜ್ಯದ ಗ್ರಾಮೀಣ ಪ್ರದೇಶಗಳಿಂದ ಹಿಡಿದು ತಾ.ಪಂ., ಜಿ.ಪಂ. ಸೇರಿದಂತೆ ರಾಜ್ಯಮಟ್ಟದಲ್ಲಿ ಪಂಚಮ ಸಾಲಿ ಸಮಾಜದ ಜನರು ಬಿಜೆಪಿಗೆ ಬೆಂಬಲವಾಗಿ ನಿಂತಿದ್ದರಿಂದ ಎರಡು ಬಾರಿ ರಾಜ್ಯದಲ್ಲಿ ಅಧಿಕಾರ ಮಾಡುವುದಕ್ಕೆ ಅವಕಾಶ ಸಿಕ್ಕಿತು. ಆದರೆ, ಅಧಿಕಾರ ಮಾಡಿದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಪಂಚಮ ಸಾಲಿ ಸಮುದಾಯದವರಿಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಒಬ್ಬರನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ವಿಧಾನಸಭೆ ಅಧ್ಯಕ್ಷ ಮತ್ತು ಕೋರ್ ಕಮಿಟಿ ಸದಸ್ಯರನ್ನಾಗಿ ನೇಮಕ ಮಾಡಲಿಲ್ಲ. ಲಿಂಗಾಯತ ಧರ್ಮದ ಒಳಪಂಗಡಗಳಲ್ಲಿ ಶೇ.10 ರಷ್ಟು ಕಡಿಮೆ ಜನಸಂಖ್ಯೆ ಇರೋರಿಗೆ 4 ಜನರಿಗೆ ಕೋರ್ ಕಮಿಟಿಯಲ್ಲಿ ಮತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿರುವಾಗ ನಾವು ಪ್ರಬಲ ಜನರು ಇದ್ದು, ಯಾಕೆ ಅವರನ್ನು ಬೆಂಬಲಿಸಬೇಕು ?
ರಾಜ್ಯದ ಸುಮಾರು 16 ಜಿಲ್ಲೆಯಲ್ಲಿ ಪಂಚಮ ಸಾಲಿ ಸಮಾಜದ ಜನರು ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ. ಇಂತಹ ಸಮುದಾಯಕ್ಕೆ ಕೇವಲ 1 ಕಡೆಯಲ್ಲಿ ಟಿಕೆಟ್ ನೀಡುವ ಮೂಲಕ ಪಂಚಮಸಾಲಿ ಸಮುದಾಯದ ಜನರನ್ನು ನಿರ್ಲಕ್ಷ್ಯ ಮಾಡಲಾಗಿದೆ. ನಾವು ಕಳೆದ ಹಲವು ತಿಂಗಳ ಕೆಳಗೆ ಅವರಿಗೆ ವಿನಯ, ಗೌರವ, ಪ್ರೀತಿ, ಸಹನೆಯಿಂದ ರಾಜ್ಯದ 3 ಕಡೆಗಳಲ್ಲಿ ಪಂಚಮಸಾಲಿ ಸಮಾಜದವರಿಗೆ ಟಿಕೆಟ್ ಕೊಡಿ ಎಂದು ತಿಳಿಸಲಾಗಿತ್ತು. ಆದರೆ, ರಾಜ್ಯದ 9 ಕಡೆಗಳಲ್ಲಿ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ಕೊಟ್ಟರೆ ಪಂಚಮಸಾಲಿ ಸಮಾಜದವರಿಗೆ ಮಾತ್ರ 1 ಟಿಕೆಟ್ ನೀಡಲಾಗಿದೆ.
ಇನ್ನೊಂದು ಉಪ ಪಂಗಡಗಳಿಗೆ 4-4 ಕಡೆಗಳಲ್ಲಿ ನೀಡಲಾಗಿದೆ. ಇದನ್ನು ಮೇಲ್ನೋಟಕ್ಕೆ ಗಮನಿಸಿದಾಗ ಬಿಜೆಪಿಯವರಿಗೆ ಪಂಚಮಸಾಲಿ ಸಮಾಜದ ಮತಗಳು ಅವಶ್ಯಕತೆ ಇರುವುದಿಲ್ಲ, ಪಂಚಮಸಾಲಿ ಸಮಾಜದವರು ಬೆಳಯಬಾರದು ಎಂದು ಅನಿಸುತ್ತದೆ. ಆದರೆ, ಪಂಚಮಸಾಲಿ ಸಮಾಜದ ಜನರು ಜಾಗೃತರಾಗಿದ್ದಾರೆ. ಈ ತಪ್ಪನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಾಡಿದ್ದರಿಂದ ರಾಜ್ಯದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದೆ. ಮತ್ತೆ ಆ ತಪ್ಪನ್ನು ಪುನರಾವರ್ತನೆ ಮಾಡದೇ ಪಕ್ಷದ ಮುಖಂಡರು ಅರಿತುಕೊಂಡು ಜಾಗೃತರಾಗಬೇಕಿದೆ. ಒಂದು ವೇಳೆ ಜಾಗೃತರಾಗದೇ ಹೋದರೆ ಪಂಚಮಸಾಲಿ ಸಮಾಜದ ಜನರು ನಿಮ್ಮನ್ನು ಮತ್ತೆ ಜಾಗೃತರನ್ನಾಗಿ ಮಾಡುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಪಂಚಮಸಾಲಿ ಸಮಾಜದ ಶಾಸಕರು, ಮಾಜಿ ಶಾಸಕರು ಮತ್ತು ಸಮಾಜದ ಹಿರಿಯರು ನಮ್ಮ ಸಂಪರ್ಕ ಮಾಡುತ್ತಾ ಬಂದಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ, ಸಮಯದ ಅವಕಾಶ ಇರುವುದರಿಂದ ಪಂಚಮಸಾಲಿ ಸಮಾಜದ ಹಿರಿಯರ ಜೊತೆಗೆ ಚರ್ಚೆ ಮಾಡಿ ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ಮುಂದಾದರೆ ಒಳಿತು ಎಂದು ಅವರು ಹೇಳಿದರು.