ಮಲೇಬೆನ್ನೂರು, ಎ. 5 – ಹಾಲಿವಾಣ ಗ್ರಾಮದಲ್ಲಿ ಕಳೆದ 4 ದಿನಗಳಿಂದ ಅದ್ಧೂರಿಯಾಗಿ ಜರುಗಿದ ಗ್ರಾಮದೇವತೆ ಶ್ರೀ ಏಳೂರು ಕರಿಯಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಸಂಜೆ ತೆರೆ ಬಿದ್ದಿತು.
ಏಳು ಹಳ್ಳಿಗಳ ಜನರು ಸೇರಿ ಆಚರಿಸಿದ ಈ ಜಾತ್ರೆಯ 5ನೇ ದಿನವಾದ ಶುಕ್ರವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾಯಂಕಾಲ ಓಕುಳಿ ಕಾರ್ಯಕ್ರಮವನ್ನು ಗ್ರಾಮದಲ್ಲಿ ಎಲ್ಲರೂ ಸೇರಿಕೊಂಡು ಪರಸ್ಪರ ಬಣ್ಣ ಎರಚುವ ಮೂಲಕ ಸಂಭ್ರಮದಿಂದ ಆಚರಿಸಿ ಖುಷಿ ಪಟ್ಟರು. ಸಂಜೆ ದೇವಿಗೆ ಮಹಾಮಂಗಳಾರತಿ ಪೂಜೆ ಸಲ್ಲಿಸಿ, ಕಂಕಣ ವಿಸರ್ಜನೆ ಮಾಡುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಯಿತು.
ಗ್ರಾಮದಲ್ಲಿ 14 ವರ್ಷಗಳ ನಂತರ 15ನೇ ವರ್ಷದಲ್ಲಿ ಗ್ರಾಮದೇವತೆ ಹಬ್ಬವನ್ನು ಹಾಲಿವಾಣ ಸೇರಿದಂತೆ ಏಳು ಊರು ಜನರು ಸೇರಿ ಶಾಂತಿಯುತವಾಗಿ ಯಶಸ್ವಿಗೊಳಿಸಿರು ವುದಕ್ಕೆ ತಾ. ಆಡಳಿತ ಮತ್ತು ಪೊಲೀಸ್ ಇಲಾಖೆ ಗ್ರಾಮಸ್ಥರು ಅಭಿನಂದಿಸಿದರು.