ವಿಜಯಪುರ, ಏ. 4 – ಕೊಳವೆ ಬಾವಿಯಲ್ಲಿ ಬಿದ್ದಿದ್ದ ಎರಡು ವರ್ಷದ ಮಗು ಸಾತ್ವಿಕ್ನನ್ನು 20 ಗಂಟೆಗಳ ಕಾರ್ಯಾಚರಣೆ ನಂತರ ರಕ್ಷಿಸಲಾಗಿದೆ.
ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಸತೀಶ ಮುಜಗೊಂಡ ಹಾಗೂ ಪೂಜಾ ಮುಜಗೊಂಡ ಅವರ ಮಗು ಸಾತ್ವಿಕ್ ಬುಧವಾರ ಸಂಜೆ ಕೊಳವೆ ಬಾವಿಯಲ್ಲಿ ಬಿದ್ದಿತ್ತು. ಮಗು 16 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಕಾರಣ, ತ್ವರಿತವಾಗಿ ರಕ್ಷಣೆ ಕಾರ್ಯ ಸಾಧ್ಯವಾಗಿದೆ.
ತಕ್ಷಣವೇ ಮಗುವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಮಗುವಿನ ದೇಹದ ಮೇಲೆ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಂಗಳವಾರವಷ್ಟೇ ಮುಜಗೊಂಡ ಕುಟುಂಬದವರು ಕೊಳವೆ ಬಾವಿ ಕೊರೆಸಿದ್ದರು. ಆದರೆ, ನೀರು ಸಿಕ್ಕಿರಲಿಲ್ಲ. ಕೊಳವೆ ಬಾವಿ ಮುಚ್ಚದೇ ಹಾಗೆ ಬಿಡಲಾಗಿತ್ತು. ಎರಡು ವರ್ಷದ ಮಗು ಸಾತ್ವಿಕ್ ಆಡುವಾಗ ಕೊಳವೆ ಬಾವಿಯಲ್ಲಿ ತಲೆ ಕೆಳಗಾಗಿ ಬಿದ್ದಿತ್ತು.