ಬಸವ ಧರ್ಮ ಜ್ಞಾನ ಪೀಠದ ಶ್ರೀ ದಯಾನಂದ ಸ್ವಾಮೀಜಿ ಆಗ್ರಹ
ಹರಿಹರ, ಏ. 4- ಗೋವುಗಳ ಹತ್ಯೆ ಹಾಗೂ ಗೋ ಮಾಂಸ ರಫ್ತನ್ನು ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ನಿಷೇಧಿಸಬೇಕೆಂದು ಬೆಂಗಳೂರಿನ ಬಸವ ಧರ್ಮ ಜ್ಞಾನ ಪೀಠದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಾತ್ಮ, ಅಹಿಂಸೆ, ಕೃಷಿ ಮತ್ತು ಋಷಿ ಪರಂಪರೆ ಪ್ರಧಾನವಾದ ಭಾರತದಿಂದ ಗೋಮಾಂಸವನ್ನು ದೊಡ್ಡ ಪ್ರಮಾಣದಲ್ಲಿ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ, ಈ ರಫ್ತನ್ನು ಹಾಗೂ ಸಂಪೂರ್ಣ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಬೇಕು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ವಹಿಸಿದ ಆಸಕ್ತಿ ಸ್ವಾಗತಾರ್ಹ, ಇದೇ ಹುಮ್ಮಸ್ಸಿನಲ್ಲಿ ಗೋಮಾಂಸ ರಫ್ತನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕು. ದೇಶದ ಸಂಸ್ಕೃತಿ, ಪರಂಪರೆಯ ಹಿತ ರಕ್ಷಣೆ ಮಾಡಬೇಕೆಂದರು.
ಹರಿಹರ ತಾಲ್ಲೂಕಿನ ಹಾಲಿವಾಣ ಗ್ರಾಮ ಹಾಗೂ ಸುತ್ತಲಿನ ಒಟ್ಟು ಏಳು ಗ್ರಾಮಗಳಲ್ಲಿ ಈಚೆಗೆ ಕರಿಯಮ್ಮ ದೇವಿ ಜಾತ್ರೆಗೆ ಕೋಣ, ಕುರಿ ಬಲಿಗೆ ಸಿದ್ಧತೆ ನಡೆದಿತ್ತು, ಈ ಕುರಿತು ಜಿಲ್ಲಾಡಳಿತದ ಗಮನ ಸೆಳೆದಾಗ ನಮ್ಮ ಮಂಡಳಿ ಹಾಗೂ ಅಧಿಕಾರಿಗಳ ಶ್ರಮದಿಂದ ಹಾಲಿವಾಣ ಗ್ರಾಮದ ದೇವಸ್ಥಾನದ ಆವರಣದಲ್ಲಿ ಸಂಪೂರ್ಣ ಪ್ರಾಣಿ ಬಲಿ ತಡೆಯಲಾಗಿದೆ ಎಂದರು.
ಜಿಲ್ಲೆಯ ಇನ್ನಿತರೆ ಗ್ರಾಮಗಳಲ್ಲೂ ದೇವತೆ ಹಬ್ಬ, ಜಾತ್ರೆಗಳಿದ್ದು, ಅಲ್ಲಿಯೂ ಕೂಡ ಪ್ರಾಣಿ ಬಲಿಯಾಗದಂತೆ ಜಿಲ್ಲಾಡಳಿತ ಗಮನಹರಿಸಬೇಕಿದೆ. ಮಸೀದಿ, ಚರ್ಚುಗಳ ಆವರಣದಲ್ಲಿ ಪ್ರಾಣಿ ಬಲಿ ನಡೆಯುವುದಿಲ್ಲ. ಆದರೆ ದೇವಾಲಯಗಳು ವಧಾಲಯಗಳಾಗಿ ಮಾರ್ಪಟ್ಟಿವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಡಿನ ಹಲವು ಪ್ರಭಾವಿ ಮಠ, ಮಾನ್ಯಗಳು, ಶಿಕ್ಷಣ ಸಂಸ್ಥೆ ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳನ್ನು ನಡೆಸಲು ಮುತುವರ್ಜಿ ವಹಿಸಿವೆ, ಆದರೆ ಮಠ, ಮಾನ್ಯಗಳ ಮೂಲ ಕೆಲಸವೆಂದರೆ ಜನರಲ್ಲಿ ಮನೆ ಮಾಡಿರುವ ಮೌಢ್ಯತೆ, ಅಂಧಾನುಕರಣೆ ದೂರ ಮಾಡುವುದಾಗಿದೆ ಎಂದರು.
ಗೋಷ್ಠಿಯಲ್ಲಿ ಮಂಡಳಿಯ ಸುನಂದಾದೇವಿ, ಶರಣಪ್ಪ ಕಮ್ಮಾರ್ ಇದ್ದರು.