ಹಾಲಿವಾಣದಲ್ಲಿ ಸಿಡಿ ಉತ್ಸವಕ್ಕೆ ಹರಿದುಬಂದ ಜನಸಾಗರ

ಹಾಲಿವಾಣದಲ್ಲಿ ಸಿಡಿ ಉತ್ಸವಕ್ಕೆ ಹರಿದುಬಂದ ಜನಸಾಗರ

ಮಲೇಬೆನ್ನೂರು, ಏ. 4- ಹಾಲಿವಾಣ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಏಳೂರು ಕರಿಯಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಜರುಗಿದ ಸಿಡಿ ಉತ್ಸವಕ್ಕೆ ಜನ ಸಾಗರವೇ ಹರಿದುಬಂದಿತ್ತು.

ಕರಿಯಮ್ಮ ದೇವಿ ದೇವಸ್ಥಾನದ ಬಳಿ ನಡೆದ ಸಿಡಿ ಉತ್ಸವದ ಆರಂಭದಲ್ಲಿ ಸಿಡಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ, ಮೊದಲಿಗೆ ದೇವಿಯ ಹೂವಿನ ಹಾರವನ್ನು ಹಾಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. 

ಬಳಿಕ 16 ಜನ ಸಿಡಿ ಉತ್ಸವದಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು.

14 ವರ್ಷಗಳ ನಂತರ 15 ನೇ ವರ್ಷದಲ್ಲಿ ವೈಭವದೊಂದಿಗೆ ಏಳು ಊರು ಜನರು ಸೇರಿ ಆಚರಿಸಿದ ಶ್ರೀ ಏಳೂರು ಕರಿಯಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಸಿಡಿ ಉತ್ಸವ ಕೂಡಾ ಹೆಚ್ಚು ಮಹತ್ವ ಪಡೆದುಕೊಂಡಿತ್ತು.

ಹಾಗಾಗಿ ಈ ಸಿಡಿ ಉತ್ಸವ ನೋಡಲು ಗ್ರಾಮದ ಜನತೆ ಸೇರಿದಂತೆ ಹಬ್ಬಕ್ಕೆ ಬಂದಿದ್ದ ಬಂಧು-ಮಿತ್ರರು ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಸಾವಿರಾರು ಜನ ಆಗಮಿಸಿದ್ದರು.

ರಾತ್ರಿ 8 ಗಂಟೆಯ ನಂತರ ಭದ್ರಾವತಿಯ ಚಂದನ ಮ್ಯೂಸಿಕಲ್ ನೈಟ್ಸ್ ಆರ್ಕೆಸ್ಟ್ರಾ ತಂಡದವರು ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.

ಶುಕ್ರವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ಮಧ್ಯಾಹ್ನ 3 ಗಂಟೆಯಿಂದ ಬೆಲ್ಲದ ಬಂಡಿ ಉತ್ಸವ ಮತ್ತು ಓಕುಳಿ ಕಾರ್ಯಕ್ರಮ ನೆರವೇರಿದ ಬಳಿಕ ಸಂಜೆ 6 ಗಂಟೆಗೆ ದೇವಿಗೆ ಮಹಾಮಂಗಳಾರತಿ ಮಾಡಿ, ಕಂಕಣ ವಿಸರ್ಜನೆಯೊಂದಿಗೆ ಜಾತ್ರೆಗೆ ತೆರೆ ಎಳೆಯಲಾಗುವುದೆಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ ತಿಳಿಸಿದ್ದಾರೆ. 

error: Content is protected !!