ನೈಸರ್ಗಿಕ ವಿಕೋಪ ಎದುರಿಸುವಲ್ಲಿ ಮುಂಚೂಣಿಯಲ್ಲಿರುವ ದ್ವೀಪ ದೇಶ
ತೈಪೈ (ತೈವಾನ್), ಏ. 4 – ತೈವಾನ್ನಲ್ಲಿ 25 ವರ್ಷಗಳಲ್ಲೇ ಅತ್ಯಂತ ತೀವ್ರ ಸ್ವರೂಪದ ಭೂಕಂಪ ಸಂಭವಿಸಿದೆ. ಕನಿಷ್ಠ ಐವರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಕಟ್ಟಡಗಳು ಹಾಗೂ ಹೆದ್ದಾರಿಗಳಿಗೆ ಹಾನಿಯಾಗಿದೆ.
ಆದರೆ, ತೈವಾನ್ ಭೂಕಂಪಗಳನ್ನು ಎದುರಿಸಲು ಸನ್ನದ್ಧವಾಗಿದ್ದದ್ದೂ ಗಮನಾರ್ಹ. ಭೀಕರ ಸ್ವರೂಪದ ಭೂಕಂಪ ಸಂಭವಿಸಿದರೂ, ಈ ದ್ವೀಪ ದೇಶದಲ್ಲಿ ಸಾವು – ನೋವಿನ ಪ್ರಮಾಣ ಸಾಕಷ್ಟು ಕಡಿಮೆ ಇದೆ. ಇದಕ್ಕೆ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವುದೇ ಕಾರಣ.
ಏಕಿಷ್ಟೊಂದು ಕಂಪನ?
ತೈವಾನ್ ಪೆಸಿಫಿಕ್ ವಲಯದ `ಅಗ್ನಿ ಉಂಗುರ’ ವ್ಯಾಪ್ತಿಯಲ್ಲಿದೆ. ಪೆಸಿಫಿಕ್ ಸಮುದ್ರದಲ್ಲಿನ ಈ ಭಾಗದಲ್ಲಿ ಭೂಕಂಪದ ಅಪಾಯ ಹೆಚ್ಚು. ಈ ಭಾಗದಲ್ಲೇ ವಿಶ್ವದಲ್ಲೇ ಬಹುತೇಕ ಭೂಕಂಪಗಳು ಸಂಭವಿಸುತ್ತವೆ.
ಈ ಭಾಗದಲ್ಲಿ ಫಿಲಿಪೈನ್ಸ್ ಭೂಫಲಕ ಹಾಗೂ ಯೂರೇಷಿಯನ್ ಭೂ ಫಲಕಗಳು ಸಂಧಿಸುತ್ತವೆ. ಈ ಭೂ ಫಲಕಗಳ ನಡುವಿನ ಒತ್ತಡ ಆಗಾಗ ಭೂಕಂಪದ ಸ್ವರೂಪ ಪಡೆಯುತ್ತದೆ.
ಈ ಭಾಗದಲ್ಲಿರುವ ಬೆಟ್ಟ ಪ್ರದೇಶಗಳೂ ಸಹ ನೆಲ ನಡುಗುವಿಕೆ ಹಾಗೂ ಭೂಕುಸಿತದ ತೀವ್ರತೆ ಹೆಚ್ಚಾಗಲು ಕಾರಣವಾಗುತ್ತವೆ. ತೈವಾನ್ನ ಪೂರ್ವ ಕರಾವಳಿಯಲ್ಲಿ ಭೂಕಂಪ ಕೇಂದ್ರೀಕೃತವಾಗಿದ್ದು, ಈ ಭಾಗದಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿವೆ. ಕುಸಿದ ಅವಶೇಷಗಳು ಹೆದ್ದಾರಿ ಹಾಗೂ ಸುರಂಗಗಳಿಗೆ ಹಾನಿ ಮಾಡಿ ಸಾವುಗಳಿಗೆ ಕಾರಣವಾಗಿವೆ.
ತೈವಾನ್ ಎಷ್ಟು ಸನ್ನದ್ಧವಾಗಿತ್ತು?
ಬುಧವಾರ ಸಂಭವಿಸಿದ ಭೂಕಂಪದ ತೀವ್ರತೆ ತೈವಾನ್ ಭೂಕಂಪನ ನಿಗಾ ಕೇಂದ್ರದ ಪ್ರಕಾರ 7.2ರಷ್ಟಿತ್ತು. ಭೂಕಂಪದಿಂದ ಹುವಾಲೀನ್ ಕಟ್ಟಡಗಳಿಗೆ ಹಾನಿಯಾಗಿದೆ. ಆದರೆ, ರಾಜಧಾನಿ ತೈಪೈನಲ್ಲಿ ಭೂಕಂಪದ ಪ್ರಭಾವ ತೀವ್ರವಾಗಿದ್ದರೂ ಹಾನಿ ಅತ್ಯಲ್ಪ.
ಬೆಳಿಗ್ಗೆ ಜನಸಂದಣಿ ಹೆಚ್ಚಾಗಿರುವ ವೇಳೆಯೇ ಭೂಕಂಪ ಸಂಭವಿಸಿದೆ. ಆದರೆ, ಸಾಮಾನ್ಯ ಸಂಚಾರಕ್ಕೆ ಸ್ವಲ್ಪ ಮಾತ್ರವೇ ಅಡ್ಡಿಯಾಗಿತ್ತು. ಭೂಕಂಪದ ಕೆಲವೇ ನಿಮಿಷಗಳ ನಂತರ ಪೋಷಕರು ಮತ್ತೆ ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ದರು ಹಾಗೂ ಉದ್ಯೋಗಿಗಳು ಕಚೇರಿಗಳಿಗೆ ತೆರಳಿದರು.ಭೂಕಂಪ ಎದುರಿಸುವ ಸಿದ್ಧತೆಯಲ್ಲಿ ತೈವಾನ್ ವಿಶ್ವದ ಮುಂಚೂಣಿ ದೇಶಗಳಲ್ಲಿ ಒಂದಾಗಿದೆ ಎಂದು ಮಿಸ್ಸೌರಿ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯದ ಭೂಕಂಪ ಶಾಸ್ತ್ರಜ್ಞ ಸ್ಟೀಫನ್ ಗಾವೋ ಹೇಳಿದ್ದಾರೆ.
ತೈವಾನ್ ದ್ವೀಪದಲ್ಲಿ ಕಟ್ಟಡ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಇಲ್ಲಿ ವಿಶ್ವ ದರ್ಜೆಯ ಭೂಕಂಪ ಎದುರಿಸುವ ಜಾಲವಿದೆ ಹಾಗೂ ಭೂಕಂಪ ಸುರಕ್ಷತೆ ಬಗ್ಗೆ ವ್ಯಾಪಕ ಅರಿವು ಮೂಡಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಭೂಕಂಪ ನಿರೋಧಕವಾಗಿ ಕಟ್ಟಡಗಳನ್ನು ನಿರ್ಮಿಸುವ ಬಗ್ಗೆ ಸರ್ಕಾರ ಕಾಲಾನುಕಾಲಕ್ಕೆ ನಿಯಮಗಳನ್ನು ಸುಧಾರಿಸುತ್ತಾ ಬಂದಿದೆ. ಇದರಿಂದ ಕಟ್ಟಡ ನಿರ್ಮಾಣದ ವೆಚ್ಚ ಹೆಚ್ಚಾದರೂ ಸಹ, ಅಲ್ಲಿನ ನಿವಾಸಿಗಳಿಗೆ ಹೆಚ್ಚಿನ ಸುರಕ್ಷತೆ ದೊರೆತಿದೆ.
2016ರಲ್ಲಿ ತೈನಾನ್ನಲ್ಲಿ ಸಂಭವಿಸಿದ ಭೂಕಂಪದ ವೇಳೆ 17 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದು, ಐವರು ಕಾರ್ಮಿಕರು ಸಾವನ್ನಪ್ಪಿದ್ದರು. ಆ ಭೂಕಂಪದಲ್ಲಿ ಇದೊಂದೇ ಅವಘಡ ಸಂಭವಿಸಿತ್ತು. ತಪ್ಪು ಮಾಡಿದವರಿಗೆ ಜೈಲು ಶಿಕ್ಷೆಯೂ ಆಗಿತ್ತು.
ತೈವಾನ್ ಶಾಲೆಗಳಲ್ಲಿ ನಿಯಮಿತವಾಗಿ ಭೂಕಂಪದ ಅರಿವು ಮೂಡಿಸಲಾಗುತ್ತದೆ. ಸಾರ್ವಜನಿಕರಿಗೆ ಮೊಬೈಲ್ಗಳ ಮೂಲಕ ಭೂಕಂಪದ ಎಚ್ಚರಿಕೆಯನ್ನೂ ನೀಡಲಾಗು ತ್ತದೆ. ಈ ಎಲ್ಲ ಕ್ರಮಗಳಿಂದ ತೈವಾನ್ನಲ್ಲಿ ಭೂಕಂಪ ನಿರೋಧಕ ಶಕ್ತಿ ಹೆಚ್ಚಾಗಿದೆ.
ಭೂಕಂಪಗಳೊಂದಿಗೆ ಬದುಕು : ತೈವಾನ್ ಹಾಗೂ ಸುತ್ತಲಿನ ಜಲ ಪ್ರದೇಶದಲ್ಲಿ 1980ರ ನಂತರ ರಿಕ್ಟರ್ ಮಾಪಕದಲ್ಲಿ 4 ಕ್ಕಿಂತ ಹೆಚ್ಚಾಗಿದ್ದ 2 ಸಾವಿರದಷ್ಟು ಭೂಕಂಪಗಳು ಸಂಭವಿಸಿವೆ. ರಿಕ್ಟರ್ ಮಾಪಕದಲ್ಲಿ 5.5ಕ್ಕಿಂತ ಹೆಚ್ಚಿರುವ 100ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸಿವೆ.
ಸೆಪ್ಟೆಂಬರ್ 21, 1999ರಲ್ಲಿ ರಿಕ್ಟರ್ ಮಾಪಕದಲ್ಲಿ 7.7ರಷ್ಟಿದ್ದ ಭೂಕಂಪ ಸಂಭವಿಸಿ 2,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಹಾಗೂ ಲಕ್ಷಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಸಾವಿರಾರು ಕಟ್ಟಡಗಳು ನಾಶವಾಗಿದ್ದವು. 2018ರಲ್ಲಿ ಹುವಾಲೀನ್ ಕೌಂಟಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಐತಿಹಾಸಿಕ ಹೋಟೆಲ್ ಹಾಗೂ ಇತರೆ ಕಟ್ಟಡಗಳು ಕುಸಿದಿದ್ದವು.
ಈ ಭೂಕಂಪನದ ತೀವ್ರ ಚಟುವಟಿಕೆ ಗಳು ಇನ್ನೂ ಲಕ್ಷಾಂತರ ವರ್ಷ ನಿಲ್ಲುವುದಿಲ್ಲ. ಹೀಗಾಗಿ ಭೂಕಂಪದ ಅಪಾಯ ಎದುರಿಸಲು ಸನ್ನದ್ಧವಾಗಿರುವುದೊಂದೇ ಏಕೈಕ ಮಾರ್ಗ ಎಂದು ಸ್ಟೀಫನ್ ಗಾವೋ ತಿಳಿಸಿದ್ದಾರೆ.